ಬೆಳಗಾವಿ: ಗೋಕಾಕ್ ಹಾಗೂ ಮೂಡಲಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರವಾಹ ಸಂಬಂಧ ನಗರದ ತಾಲೂಕು ಪಂಚಾಯತ್ ಸಭಾಗೃಹದಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗದಂತೆ ನೋಡಿಕೊಂಡು ನ್ಯಾಯ ದೊರಕಿಸಿ ಕೊಡಬೇಕು. ನೆರೆಪೀಡಿತ ಗ್ರಾಮಗಳಿಗೆ ವಾರದೊಳಗಾಗಿ ಖುದ್ದಾಗಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕು. ಕೆಲವು ಕುಟುಂಬಗಳು ಇನ್ನೂ ಶಾಲೆ,ದೇವಸ್ಥಾನಗಳಲ್ಲಿ ವಾಸಿಸುತ್ತಿವೆ. ಅಧಿಕಾರಿಗಳು ಸುಳ್ಳು ಹೇಳುವುದನ್ನ ಬಿಟ್ಟು ಅಂತಹವರಿಗೆ ಕೂಡಲೇ ಶೆಡ್‍ಗಳನ್ನು ನಿರ್ಮಿಸಿ ಕೊಡಬೇಕು ಎಂದು ಸೂಚನೆ ನೀಡಿದರು.
ಕೆಲವು ಸಂತ್ರಸ್ತ ಕುಟುಂಬಗಳಿಗೆ ದಾಖಲಾತಿಗಳ ಸಮಸ್ಯೆ ಉಂಟಾಗಿದೆ. ಆಧಾರ್ ಕಾರ್ಡ್,ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ಗಳನ್ನ ಸಂತ್ರಸ್ತರ ಕುಟುಂಬಗಳಿಗೆ ಮಾಡಿಕೊಡುವಂತೆ ಸಭೆಯಲ್ಲಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು. ಇನ್ನು, ಸಂಪೂರ್ಣ ಬಿದ್ದ ಮನೆಗಳು ಸಿ ವರ್ಗದಲ್ಲಿ ಬಂದಿದ್ದು, ಅವುಗಳನ್ನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಎ ಅಥವಾ ಬಿ ವರ್ಗದಲ್ಲಿ ತೆಗೆದುಕೊಳ್ಳಬೇಕು. ಬೀಳಲಾರದ ಮನೆಗಳು, ಎ ಮತ್ತು ಬಿ ವರ್ಗದಲ್ಲಿ ಬಂದಿದ್ದು, ಇವುಗಳನ್ನು ಪರಿಶೀಲನೆ ಮಾಡಿ ಅರ್ಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ತಿಳಿಸಿದರು.