ಬೆಳಗಾವಿ: ಸಾಧು-ಸಂತರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಬಂಧಿತನಾಗಿದ್ದ ಮಾಂಸಾಹಾರಿ ಹೋಟೆಲ್ ಮಾಲೀಕ ನಿಯಾಜ್ ಸೌದಾಗರ್ ಜಾಮೀನು ದೊರೆತಿದೆ.
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ನಲ್ಲಿ ಹಿಂದೂ ಸಾಧು-ಸಂತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಹಿಂದೂ ಪರ ಸಂಘಟನೆಗಳು, ಹೋಟೆಲ್ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 295 (ಎ), 153, 505(2)ಅಡಿ ಹೋಟೆಲ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಹೋಟೆಲ್ ಮಾಲೀಕ ನಿಯಾಜ್ ಸೌದಾಗರ್ (47) ನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರಾದ ನಿಯಾಜ್ ಪರ ವಕೀಲರು, ಜಾಮೀನು ಮಂಜೂರು ಮಾಡಿಸಿದ್ದಾರೆ.
ಇದನ್ನೂ ಓದಿ: ಮಾಂಸಾಹಾರಿ ಹೋಟೆಲ್ನಿಂದ ಸಾಧು-ಸಂತರಿಗೆ ಅಪಮಾನ ಆರೋಪ: ಹಿಂದೂ ಸಂಘಟನೆಗಳ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ:
ಪವಿತ್ರ ಶ್ರಾವಣ ಮಾಸದಲ್ಲಿ ಸಾಧು-ಸಂತರಿಗೆ ಅವಮಾನ ಮಾಡಿದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕ್ಷಮೆ ಕೇಳುವಂತೆ ಹೋಟೆಲ್ ಮಾಲೀಕನಿಗೆ ಒತ್ತಾಯಿಸಿದ್ದರು. ಇದರಿಂದ ಎಚ್ಚೆತ್ತ ಮಾಲೀಕ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ್ದಾರೆ. ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಮುಂಬೈ ಮೂಲದ ಕಂಪನಿ ಈ ಎಡವಟ್ಟು ಮಾಡಿದ್ದು, ಸಾಧು ಸಂತರಿಗೆ ಮಾಡಲಾದ ಅಪಮಾನಕ್ಕೆ ಕ್ಷಮೆ ಕೋರುತ್ತೇನೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ.