ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸೋಲಿಸಲು ಬಿ ವೈ ವಿಜಯೇಂದ್ರ ಹಣ ಕಳಿಸಿದ್ರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದಿನಕ್ಕೆ ಒಂದು ಹೇಳಿಕೆ ಕೊಡಲು ಆಗಲ್ಲ, ಧನ್ಯವಾದ. ದೇವರು ಒಳ್ಳೆಯದು ಮಾಡಲಿ ಎಂದು ಕೈಮುಗಿದಿದ್ದಾರೆ.
ಇನ್ನು ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ಪ್ರತಿಯೊಬ್ಬ ವ್ಯಕ್ತಿಯೂ ತಲೆತಗ್ಗಿಸಬೇಕಾದ ಘಟನೆ. ಎಲ್ಲಾದಕ್ಕೂ ರಾಜಕೀಯ ಬಣ್ಣ ಬಳೆಯಲು ಹೋಗಲ್ಲ. ಆದರೆ ಘಟನೆ ನಡೆದಿರೋದು ದುರದೃಷ್ಟಕರ. ಯಾವುದೇ ಸಮಾಜ ಇರಬಹುದು, ಇವತ್ತು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯನ್ನು ಈ ರೀತಿ ನಡೆಸಿಕೊಂಡಿರೋದು ಅಕ್ಷಮ್ಯ ಅಪರಾಧ ಎಂದರು.
ಗೃಹ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಘಟನೆ ಪುನರಾವರ್ತನೆ ಆಗದಂತಹ ಸಂದೇಶ ಕಳುಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ವಿಜಯೇಂದ್ರ ಆಗ್ರಹಿಸಿದರು. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಮಹಿಳೆಯ ಆರೋಗ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಚಾರಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ನಾವು ಒತ್ತಾಯಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಸೋಮವಾರ ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು. ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋಗಿದ್ದರಿಂದ ಯುವಕನ ತಾಯಿಯ ಮೇಲೆ ಯುವತಿಯ ಕುಟುಂಬಸ್ಥರು ದೌರ್ಜನ್ಯ ಮೆರೆದಿದ್ದರು. 42 ವರ್ಷ ವಯಸ್ಸಿನ ಮಹಿಳೆ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು.
ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಭಾನುವಾರ ರಾತ್ರಿ ಮನೆ ಬಿಟ್ಟು ಈ ಪ್ರೇಮಿಗಳು ಓಡಿ ಹೋಗಿದ್ದಾರೆ. ಯವತಿಗೆ ಬೇರೆ ವರನನ್ನು ನೋಡಿದ್ದು, ಸೋಮವಾರ ನಿಶ್ಚಿತಾರ್ಥ ಹಮ್ಮಿಕೊಳ್ಳಲಾಗಿತ್ತು. ಮದುವೆಯನ್ನು ಸಹ ಕುಟುಂಬಸ್ಥರು ನಿಗದಿ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ಮಾಡಿ, ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದರು. ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದರು. ಬಳಿಕ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಓಡಿ ಹೋಗಿರುವ ಯುವಕ, ಯುವತಿಗೆ ಪೊಲೀಸರ ಶೋಧ ಕಾರ್ಯ ಆರಂಭಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಾನವ ಕುಲ ತಲೆ ತಗ್ಗಿಸುವ ಕೃತ್ಯವಿದು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್