ಬೆಳಗಾವಿ : ಮರಾಠ ಸಮಾಜದವರನ್ನು ಮಹಾರಾಷ್ಟ್ರ ಎಂದು ಯಾರು ತಿಳಿದುಕೊಳ್ಳಬಾರದು. ನಮ್ಮ ಜೊತೆಗಿದ್ದು ಬದುಕುತ್ತಿರುವ ಮರಾಠ ಸಮುದಾಯದವರ ಹಲವು ವರ್ಷಗಳ ಬೇಡಿಕೆ ಹಾಗೂ ಅಭಿವೃದ್ಧಿ ಉದ್ದೇಶದಿಂದ ಪ್ರಾಧಿಕಾರ ರಚಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇಲ್ಲಿನ ರಾಮರ್ತೀಥ ನಗರದಲ್ಲಿ ದಿ.ಸುರೇಶ ಅಂಗಡಿ ಅವರ ಅಭಿಮಾನಿಗಳ ಬಳಗ ಹಾಗೂ ಜ್ಯೂ. ಶಿವರಾಜಕುಮಾರ ತಂಡದವರಿಂದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರಾಠ ಪ್ರಾಧಿಕಾರ ರಚನೆ ಮಾಡಿರುವುದು ಸಮುದಾಯ ಒಡೆಯುವುದಕ್ಕಲ್ಲ. ಇದು ಭಾಷೆಯ ಆಧಾರದ ಮೇಲೆ ರಚಿಸಿದ ಪ್ರಾಧಿಕಾರವೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ರು, ಎಷ್ಟು ಪ್ರಾಧಿಕಾರ ಮಾಡಿದ್ದರು, ಬ್ರಾಹ್ಮಣ ಸಮಾಜ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಯಾರು? ಒಂದೊಂದು ಸಮಾಜಕ್ಕೆ ಆಯಾ ಸರ್ಕಾರಗಳು ಪ್ರಾಧಿಕಾರ ರಚನೆ ಮಾಡಿವೆ. ಹೀಗಾಗಿ ಮತ್ತೊಬ್ಬರ ಬಗ್ಗೆ ಉಪದೇಶ ಮಾಡುವ ಅವಶ್ಯಕತೆಯಿಲ್ಲ ಎಂದು ಡಿಕೆಶಿಗೆ ಶೆಟ್ಟರ್ ತಿರುಗೇಟು ನೀಡಿದರು.
ನಿಗಮ ಘೋಷಣೆ ಮಾಡಿದ್ರೆ ಸಾಲದು, ನೂರು-ಎರಡನೂರು ಕೋಟಿ ಅನುದಾನ ನೀಡಿದ್ರೂ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಎಂಬ ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಘೋಷಣೆ ಮಾಡುವುದು ಮುಖ್ಯ. ಘೋಷಣೆ ಆದ ನಂತರ ಖಂಡಿತವಾಗಿ ಅನುದಾನ ನೀಡಲಾಗುತ್ತದೆ. ಜೆಹೆಚ್ ಪಟೇಲರ ಕಾಲದಲ್ಲಿ ಜಿಲ್ಲೆಗಳನ್ನು ಘೋಷಣೆ ಮಾಡಿದ್ದರು. ಆದ್ರೆ ಅವುಗಳಿಗೆ ಅನುದಾನವನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ಮುಂಬರುವ ಸರ್ಕಾರಗಳು ಹಾಗೆಯೇ ಸಮುದಾಯಕ್ಕೆ ಸರಿಹೊಂದವಷ್ಟು ಅನುದಾನ ನೀಡುತ್ತವೆ ಎಂದು ಸ್ಪಷ್ಟಪಡಿಸಿದರು.
ಇದು ಕನ್ನಡ ಮತ್ತು ಮರಾಠಿ ಭಾಷೆಯ ಸಮಸ್ಯೆ ಅಲ್ಲ. ಆ ಸಮಾಜದಲ್ಲಿರುವ ವ್ಯಕ್ತಿಗಳ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಸಮಾಜ ಒಡೆಯುವುದು ಹಾಗೂ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸಂಘರ್ಷ ಅಲ್ಲ ಎಂದು ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಕನ್ನಡ ಸಂಘಟನೆಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಇದೇ ವೇಳೆ ಸಿದ್ದಗಂಗಾ ಶ್ರೀಗಳ ಹೇಳಿಕೆಗೂ ಸ್ಪಷ್ಟನೆ ನೀಡಿದರು.