ಬೆಳಗಾವಿ: ಉಪ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ನೀಡಿರುವುದರಿಂದ ಅಥಣಿ ತಾಲೂಕಿನ ಬಿಜೆಪಿ ನಾಯಕರು ಹಾಗೂ ತಾಲೂಕು ಪಂಚಾಯತಿ ಸದಸ್ಯರು ಮತ್ತು ಜಿಲ್ಲಾ ಪಂಚಾಯತಿ ಸದಸ್ಯರು ಸಾಮೂಹಿಕ ರಾಜೀನಾಮೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ನಾವು ಲಕ್ಷ್ಮಣ ಸವದಿ ಮುಂದಾಳತ್ವದಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡವರು. ಅವರು ಇಲ್ಲದೆ ನಾವು ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ಹಾಗಾಗಿ ರಾಜೀನಾಮೆಗೆ ಸಿದ್ಧತೆ ನಡೆದಿದೆ. ಈ ವಿಷಯ ಲಕ್ಷ್ಮಣ ಸವದಿ ಅವರ ಗಮನಕ್ಕೆ ತಂದಿದ್ದೇವೆ. ಸ್ವಲ್ಪ ಸಮಯ ಕಾಯಿರಿ ಎಂದಿದ್ದಾರೆ. ಅವರ ಪ್ರತಿಕ್ರಿಯೆಗೆ ಕಾದಿದ್ದೇವೆ ಎಂದು ಬಿಜೆಪಿ ಸದ್ಯಸರು ಹೇಳಿದ್ದಾರೆ ಎನ್ನಲಾಗ್ತಿದೆ.
ನಾಳೆ ಬಿಜೆಪಿ ಕಾರ್ಯಕರ್ತರು ಸಿದ್ದೇಶ್ವರ ದೇವಾಲಯದಿಂದ ಅಥಣಿ ಪಟ್ಟಣದಲ್ಲಿ ಬೃಹತ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಇದು ಯಾವ ಮಟ್ಟಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.