ಅಥಣಿ: ಕಾಗವಾಡ ಹಾಗೂ ಅಥಣಿ ಉಪಚುನಾವಣೆ ನಾಮಪತ್ರ ಸಲ್ಲಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳು ಅಥಣಿ ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು. ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಅಥಣಿ ಪಟ್ಟಣದಲ್ಲಿ ಆಯೋಜಿಸಿದ್ದ ಕೈ ಕಾರ್ಯಕರ್ತರ ಸಭೆಯಲ್ಲಿ ಎಂ ಬಿ ಪಾಟೀಲ್ ಮಾತನಾಡಿ, ಮಹೇಶ್ ಕುಮಟಳ್ಳಿ ವಿರುದ್ಧ ಹರಿಹಾಯ್ದರು. ಮಹೇಶ್ ಕುಮಟಳ್ಳಿ ನಿಮ್ಮ ಮುಂದೆ ಬಂದರೆ ಬಿಡದೇ ಹೊಡಿರಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ನಂತರ ರಾಜ್ಯ ಬಿಜೆಪಿ ಸರ್ಕಾರ ನೆರೆ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಸುಳ್ಳುಗಾರ, ಅನರ್ಹ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಅವರು ಅಷ್ಟೇ ಹೋಗಿರೋದು ಮತದಾರ ಹೋಗಿಲ್ಲ. ನಮ್ಮ ಅಭ್ಯರ್ಥಿಗಳು 70 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಮಾತನಾಡಿ, ಶ್ರೀಮಂತ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು 20 ವರ್ಷಗಳಿಂದ ಶಾಸಕನಾಗಿ ಆಯ್ಕೆಯಾದ ವ್ಯಕ್ತಿಗೆ ಭ್ರಷ್ಟಾಚಾರ ಮಾಡಿದ್ದಾರೆ ಅಂತಾರೆ. ನಾನು ಭ್ರಷ್ಟಾಚಾರ ಎಸಗಿದ್ದರೆ 4ಸಲ ಜನ ನನ್ನ ಆಯ್ಕೆ ಮಾಡುತ್ತಿರಲಿಲ್ಲ. ಶ್ರೀಮಂತ ಪಾಟೀಲ್ ಮೊದಲು ರೈತರ ಕಬ್ಬಿನ ಬಾಕಿ ಹಣ ಸಂದಾಯ ಮಾಡಲಿ. ನಂತರ ನನ್ನ ಬಗ್ಗೆ ಮಾತನಾಡಲಿ. ಯಡಿಯೂರಪ್ಪ ಕಾಗವಾಡ ಮತಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ಹಾಗಾಗಿ ಕಳೆದ ಚುನಾವಣೆಯಲ್ಲಿ ಸೋತೆ ಎಂದು ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.