ಅಥಣಿ: ತಾಲೂಕಿನ ಕರಿಮಸೂತಿ ಏತ ನೀರಾವರಿ ಯೋಜನೆ, ಸಾವಳಗಿ ತುಂಗಳ ಸೇರಿದಂತೆ ಇತರೆ ಕಾಲುವೆಗಳಿಗೆ ನೀರು ಹರಿಸುವಂತೆ ಅಥಣಿ ಕಾಂಗ್ರೆಸ್ ಮುಖಂಡರು ಉಪ ತಹಶೀಲ್ದಾರ್ ರಾಜು ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ್ ಮಂಗಸೂಳಿ, ಅಥಣಿ ಪೂರ್ವ ಭಾಗದಲ್ಲಿ ಈಗಾಗಲೇ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಕೈ ಕೊಟ್ಟಿದೆ. ಅಧಿಕಾರಿಗಳು ಮಳೆ ಆಶ್ರಿತ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಹರಿಸುತ್ತಿಲ್ಲ. ಅಧಿಕಾರಿಗಳು ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪರಿಸ್ಥಿತಿಗೆ ಬಂದಿದ್ದಾರೆ. ಹಾಗಾಗಿ ಶೀಘ್ರವಾಗಿ ನೀರು ಹರಿಸುವಂತೆ ಆಗ್ರಹಿಸಿದರು.
ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರಿದೆ. ಆದರೂ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಈ ಭಾಗದಲ್ಲಿ ಸತತ ಐದು ವರ್ಷಗಳಿಂದ ಬರಗಾಲ ಆವರಿಸಿದೆ. ಒಂದು ಕಡೆ ಕೊರೊನಾ ವೈರಸ್ ಸಂಕಷ್ಟ, ಮತ್ತೊಂದೆಡೆ ಬರಗಾಲದಿಂದ ರೈತ ಕುಲಕ್ಕೆ ಭಾರೀ ನಷ್ಟ ಸಂಭವಿಸುತ್ತಿದೆ ಎಂದರು.
ಹದಿನೈದು ದಿನಗಳ ಹಿಂದೆಯೇ ಕಾಲುವೆಗಳ ಮೂಲಕ ನೀರು ಬಿಡಬೇಕಿತ್ತು. ಅಧಿಕಾರಿಗಳನ್ನು ಕೇಳಿದರೆ ಕಾಲುವೆಗಳನ್ನು ಸ್ವಚ್ಛ ಮಾಡಬೇಕೆಂದು ಹಾರಿಕೆ ಉತ್ತರ ನೀಡುತ್ತಾರೆ. ಎರಡು ದಿನಗಳಲ್ಲಿ ನೀರು ಹರಿಸದಿದ್ದರೆ ಅಥಣಿ ಕಾಂಗ್ರೆಸ್ ವಲಯದಿಂದ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.