ಬೆಳಗಾವಿ/ಅಥಣಿ: ಮಹೇಶ್ ಕುಮಟಳ್ಳಿ ಅನರ್ಹತೆಯಿಂದ ತೆರವಾಗಿರುವ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಮುಖಂಡರ ಜೊತೆ ಚುನಾವಣಾ ಪ್ರಚಾರ ಸಭೆ ಪ್ರಾರಂಭ ಮಾಡಿವೆ.
ಅಥಣಿ ವಿಧಾನಸಭಾ ಕ್ಷೇತ್ರದ 69 ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಕಾಂಗ್ರೆಸ್ ಮುಖಂಡರು ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ನಿಂದ ಬಿ ಫಾರಂ ಯಾರಿಗೆ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೋಚರಿಸಿಲ್ಲ. ಸದ್ಯ ಕಾಂಗ್ರೆಸ್ ಅಥಣಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿ ಬಲು ದೊಡ್ಡದು. ಸತ್ಯಪ್ಪ ಭಾಗ್ಯನಗರ್, ಗಜಾನನ ಮಂಗಸೂಳಿ, ಸದಾಶಿವ ಬುಟಾಳೆ, ಶಹಜಾನ್ ಡೊಂಗರಗಾವ, ಬಸವರಾಜ ಬುಟಾಳೆ ಹೀಗೆ ಇನ್ನೂ ಹಲವು ಪ್ರಮುಖ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಕೈ ನಾಯಕರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.
ಬಿಜೆಪಿ ವಿಚಾರಕ್ಕೆ ಬರೋದಾದ್ರೆ ಒಂದು ಕಡೆ ಮಹೇಶ್ ಕುಮಟಳ್ಳಿ ಹೆಸರು ಕೇಳಿ ಬಂದರೆ, ಮತ್ತೊಂದೆಡೆ ಡಿಸಿಎಂ ಲಕ್ಷ್ಮಣ ಸವದಿ ಅವರ ಹೇಸರು ಕೇಳಿಬರುತ್ತಿದೆ. ಕಮಲ ಪಾಳಯ ಶಾಸಕ ಸ್ಥಾನದಿಂದ ಅನರ್ಹಗೊಂಡ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡುತ್ತಾ ಅಥವಾ ಬಿಎಸ್ವೈ ಸರ್ಕಾರದಲ್ಲಿ ಡಿಸಿಎಂ ಆಗಿರುವ ಲಕ್ಷ್ಮಣ ಸವದಿಯವರಿಗೆ ಮಣೆ ಹಾಕುತ್ತಾ ಎಂಬುದು ಕುತೂಹಲ ಕೆರಳಿಸಿದೆ.
ಇತ್ತ ಅಥಣಿಯಲ್ಲಿ ಅಷ್ಟೊಂದು ಪ್ರಭಾವಿಯಾಗಿರದ ಜೆಡಿಎಸ್ ಯಾರಿಗೆ ಸ್ಪರ್ಧೆಗಿಳಿಸಲಿದೆ ಎಂಬದನ್ನು ಕಾದು ನೋಡಬೇಕಿದೆ.