ಅಥಣಿ (ಬೆಳಗಾವಿ): ಲಾಕ್ಡೌನ್ನಿಂದಾಗಿ ಕೊಪ್ಪಳದಲ್ಲಿ ಸಿಲುಕಿದ್ದ ಅಥಣಿಯ ಕೂಲಿಕಾರ್ಮಿಕರು ಮರಳಿ ಸ್ವಂತ ಊರಿಗೆ ತಲುಪಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಮಾರ್ಗದರ್ಶನದಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ಇಂದು ಸಾರಿಗೆ ಇಲಾಖೆ ಸಹಾಯದಿಂದ ಮರಳಿ ತಾಲೂಕಿಗೆ ಆಗಮಿಸಿದರು.
ಕೆಲಸ ಅರಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದ್ದಲಗುಂದಿ ಗ್ರಾಮದ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ಅಥಣಿ ತಾಲೂಕಿನ ರಡ್ಡೇರಹಟ್ಟಿ, ಮೋಳೆ, ಕನ್ನಾಳದಿಂದ ಸುಮಾರು 25 ಜನ ಕಾರ್ಮಿಕರು ಮಾರ್ಚ್ 17 ರಂದು ತಮ್ಮ ಗ್ರಾಮಗಳನ್ನು ಬಿಟ್ಟು ಹೋಗಿದ್ದರು. ಅಲ್ಲಿಯೇ ಒಂದು ತಿಂಗಳಿಂದ ಕೆಲಸದಲ್ಲಿ ತೊಡಗಿದ್ದರು. ಇವರ ಕೆಲಸ ಮುಗಿದಿದ್ದರು ತಮ್ಮ ಗ್ರಾಮಕ್ಕೆ ಮರಳಿ ಬರಲು ಲಾಕ್ಡೌನ್ನಿಂದ ವಾಹನಗಳ ಸಂಚಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.
ಈ ವಿಷಯ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ತಿಳಿಯುತ್ತಿದ್ದಂತೆ ತಕ್ಷಣ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿ, ಅಲ್ಲಿರುವ ಕಾರ್ಮಿಕರು ನಮ್ಮ ತಾಲೂಕಿನವರಾಗಿದ್ದು ಅವರು ಸ್ವಗ್ರಾಮಕ್ಕೆ ಬರಲು ಸಾರಿಗೆ ಇಲಾಖೆಯಿಂದ ವ್ಯವಸ್ಥೆ ಕಲ್ಪಿಸಲು ಹೇಳಿದ್ದರು.
ಅಲ್ಲಿನ ಜಿಲ್ಲಾಧಿಕಾರಿಗಳು ತಕ್ಷಣ ಕಾರ್ಮಿಕರು ಇರುವ ಸ್ಥಳಕ್ಕೆ ಹೋಗಿ ಎಲ್ಲರನ್ನು ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಸರ್ಕಾರಿ ಬಸ್ನಲ್ಲಿ ಅಥಣಿ ತಾಲೂಕಿಗೆ ಕಳುಹಿಸಿದ್ದಾರೆ.