ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಉತ್ತರ ಕರ್ನಾಟಕದ ಜನ ಈ ಅಧಿವೇಶನದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ರಾಜಕೀಯ ಸಂಘರ್ಷಕ್ಕೆ ಈ ಅಧಿವೇಶನ ಬಲಿ ಆಗಬಾರದು ಎಂದು ಎಚ್ಚರಿಸಿದ್ದಾರೆ. ಇನ್ನು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳ ಸ್ಥಳಾಂತರ ಮತ್ತು ಅಧಿಕೃತವಾಗಿ ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಿಸುವ ಬಗ್ಗೆ ಸ್ಪಷ್ಟ ನಿಲುವನ್ನು ಸರ್ಕಾರ ಈ ಅಧಿವೇಶನದಲ್ಲಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಹೌದು, 500 ಕೋಟಿ ರೂ. ಖರ್ಚು ಮಾಡಿ ಕಟ್ಟಿರುವ ಸುವರ್ಣ ವಿಧಾನಸೌಧ ಸಮರ್ಪಕ ಬಳಕೆಯಾಗುತ್ತಿಲ್ಲ. ಕೇವಲ ಬಿಳಿ ಆನೆಯಾಗಿ ನಿಂತಿದೆ. ರಾಜ್ಯ ಮಟ್ಟದ ಕಚೇರಿ ಸ್ಥಳಾಂತರ ವಿಚಾರದಲ್ಲಿ ಯಾವ ಸರ್ಕಾರವೂ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಇನ್ನು ಕೇವಲ ಬಾಯಿ ಮಾತಿನಲ್ಲಿ ಬೆಳಗಾವಿ 2ನೇ ರಾಜಧಾನಿ ಎಂದು ಕರೆಯುವ ರಾಜಕಾರಣಿಗಳು, ಅಧಿಕೃತ ಘೋಷಣೆಗೆ ಮಾತ್ರ ಹಿಂದೇಟು ಹಾಕುತ್ತಿರುವ ಬಗ್ಗೆ ಉತ್ತರ ಕರ್ನಾಟಕ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ-ಮಾಜಿ ಸಿಎಂ ಕುಮಾರಸ್ವಾಮಿ, ಡಿಕೆಶಿ-ಹೆಚ್ಡಿಕೆ ನಡುವಿನ ರಾಜಕೀಯ ಸಂಘರ್ಷ ಹಾಗೂ ಜಾತಿ ಗಣತಿ ವಿಚಾರಕ್ಕೆ ಬೆಳಗಾವಿಯ ಅಧಿವೇಶನ ಬಲಿಯಾಗಬಾರದು. ಹಾಗಾಗಿ, ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು. ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವ ಬಗ್ಗೆ ಉಭಯ ಸದನಗಳಲ್ಲಿ ಚರ್ಚಿಸಿ ಸರ್ಕಾರ ಸ್ಪಷ್ಟಪಡಿಸುವಂತೆ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಡಿ. 4ರಿಂದ ನಡೆಯಲಿರುವ ಚಳಿಗಾಲ ಅಧಿವೇಶನದ ಬಗ್ಗೆ ಉತ್ತರ ಕರ್ನಾಟಕ ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ನೀರಾವರಿ ಯೋಜನೆ, ಶಿಕ್ಷಣ, ಉದ್ಯೋಗ ಸೇರಿ ಮುಂತಾದ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಅಧಿಕೃತವಾಗಿ ಘೋಷಿಸಬೇಕು. ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಿ ಉತ್ತರ ಕರ್ನಾಟಕದ ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಹೊರಟ್ಟಿ ವರದಿ ಅನುಷ್ಠಾನ ಮಾಡಲು ಒತ್ತಾಯ: ಈ ಹಿಂದೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ಶಿಫಾರಸು ಮಾಡಿದಂತೆ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ 13 ಕಚೇರಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸರ್ಕಾರದ ನಿಲುವು ಏನು? ಸಿಎಂ ಮತ್ತು ಡಿಸಿಎಂ ಗಂಭೀರವಾಗಿ ಚಿಂತಿಸಬೇಕು. ಸರ್ಕಾರದ ನಿಲುವಿನ ನಂತರ ನಮ್ಮ ಮುಂದಿನ ಹೋರಾಟದ ಬಗ್ಗೆ ಕನ್ನಡಪರ ಸಂಘಟನೆಗಳಿಂದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಅಶೋಕ ಚಂದರಗಿ ಎಚ್ಚರಿಸಿದ್ದಾರೆ.
ಇದನ್ನೂಓದಿ:ಅಧಿವೇಶನಕ್ಕೆ ಸಿದ್ಧಗೊಳ್ಳುತ್ತಿದೆ ಸುವರ್ಣ ವಿಧಾನಸೌಧ: ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ