ಬೈಲಹೊಂಗಲ: ನ್ಯಾಯಾಲಯದ ಆವರಣದಲ್ಲಿಯೇ ಅರ್ಜಿದಾರರ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ಬೈಲಹೊಂಗಲ ಪಟ್ಟಣ ನ್ಯಾಯಾಲಯ ಆವರಣದಲ್ಲಿ ಸೋಮವಾರ ನಡೆದಿದೆ.
2015ರಲ್ಲಿ ಈದ್ ಮಿಲಾದ್ ಹಬ್ಬದ ವರದಿಗೆ ತೆರಳಿದ ಮಾಧ್ಯಮದವರ ಕ್ಯಾಮೆರಾ ಕಸಿದುಕೊಂಡು, ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಪ್ರಕರಣಗಳು ದಾಖಲಾಗಿವೆ.
ಸೋಮವಾರ ಆರೋಪಿಗಳು ನ್ಯಾಯಾಲಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರ ರಫೀಕ್ ಬಡೇಘರ ಎಂಬುವವರ ಮೇಲೆ ರಫೀಕ್ ಸವದತ್ತಿ ಎಂಬ ಆರೋಪಿ ಹಲ್ಲೆ ಮಾಡಿದ್ದಾರೆ. ಸೂಕ್ತ ರಕ್ಷಣೆ ನೀಡುವಂತೆ ಅರ್ಜಿದಾರ ರಫೀಕ್ ಬಡೇಘರ ವಿಡಿಯೋ ಒಂದರಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಹೋರಾಟಗಾರರಾದ ರಫೀಕ ಬಡೇಘರ, ಆಶೀಫ್ ಗೋವೆ ಇವರು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಹಲ್ಲೆ ಪ್ರಕರಣದ ಆರೋಪಿ ರಫೀಕ ಸವದತ್ತಿ, ಅರ್ಜಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾರೆ ಎಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ರಫೀಕ್ ಪೊಲೀಸರು ಐಪಿಸಿ 323, 341, 504, 506 ಕಲಂ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.