ಅಥಣಿ: ಕೊರೊನಾ ಮಹಾಮಾರಿ ಸೋಂಕಿನಿಂದ ನಿಧನ ಹೊಂದಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ಮರಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಭಾಗದ ಅರವಿಂದರಾವ್ ದೇಶಪಾಂಡೆ ಅವರು ಕಂಬನಿ ಮಿಡಿದಿದ್ದಾರೆ.
ರಾಜ್ಯ ರೈಲ್ವೆ ಸಚಿವ, ಬೆಳಗಾವಿ ಸಂಸದರಾದ ಸುರೇಶ್ ಅಂಗಡಿ ಹಠಾತ್ ನಿಧನದಿಂದ ಉತ್ತರ ಕರ್ನಾಟಕಕ್ಕೆ ಭಾರಿ ಆಘಾತವಾಗಿದೆ. ನಾಲ್ಕು ಬಾರಿ ಬೆಳಗಾವಿಯಿಂದ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದು, ತಮ್ಮ ಸೌಜನ್ಯಪೂರ್ಣ ಮತ್ತು ಸರಳ ನಡವಳಿಕೆಯಿಂದ ಎಲ್ಲರಿಗೂ ಬೇಕಾಗಿದ್ದರು. ರಾಜಕೀಯ ಕ್ಷೇತ್ರವಲ್ಲದೇ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಶೈಕ್ಷಣಿಕ ಚಟುವಟಿಕೆ ಅಭಿರುಚಿ ಹೊಂದಿದ್ದರು.
ಸುರೇಶ್ ಅಂಗಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದರು, ಸಂಘದ ಸಾಮಾಜಿಕ ಮತ್ತು ಸೇವಾ ಚಟುವಟಿಕೆಗಳಲ್ಲಿ ಬೆಂಬಲ ನಿಡುತ್ತಿದ್ದರು. ಅವರ ನಿಧನದಿಂದ ಉತ್ತರ ಕರ್ನಾಟಕದ ಹಾಗೂ ಬೆಳಗಾವಿ ಜಿಲ್ಲೆಗೆ ತುಂಬಲಾರದ ಹಾನಿಯಾಗಿದೆ ಎಂದು ಸಂತಾಪ ಸೂಚಿಸಿದರು.