ಬೆಳಗಾವಿ : ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಕೆಲ ಹೊತ್ತಿನಲ್ಲೇ ಘೋಷಣೆ ಆಗಲಿದೆ. ಇನ್ನು ಸೋಲು ಒಪ್ಪಿಕೊಂಡಿರುವ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ, ಹಣದ ಹೊಳೆಯ ನಡುವೆ ನನಗೆ ಮತ ನೀಡಿದ ಶಿಕ್ಷಕರಿಗೆ ಧನ್ಯವಾದ ಎಂದಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರವಾಹದಲ್ಲಿ ನನ್ನ ಪರವಾಗಿ ಸಾಕಷ್ಟು ಜನ ನಿಂತಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳುತ್ತಿರುವಾಗ ನನ್ನ ಪರವಾಗಿ ಈ ಪ್ರಮಾಣದ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದ. ಈ ವೇಳೆ ನಾನು ಸಾಕಷ್ಟು ಪಾಠ ಕಲಿತಿದ್ದೇನೆ. ನನ್ನ ಪಕ್ಷದ ಸಚಿವರು, ಶಾಸಕರು, ಪ್ರಾಂಜಲ ಮನಸ್ಸಿನಿಂದ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು.
ಹಣದ ಹೊಳೆ ಹರಿದ ಬಗ್ಗೆ ಹೋರಾಟ ಮಾಡ್ತಿರಾ ಎಂಬ ಪ್ರಶ್ನೆಗೆ, ಈಗತಾನೇ ಚುನಾವಣೆ ಪ್ರಕ್ರಿಯೆ ಮುಗಿದಿದೆ. ಶಿಕ್ಷಕರು ಅವರು ಅವರನ್ನ ಮಾರಿಕೊಂಡಿದ್ದಾರೆ ಎಂದು ಹೇಳುವುದು ತಪ್ಪು. ಶಿಕ್ಷಕರು ಆ ಕ್ಷಣಕ್ಕೆ ನಿರ್ಧಾರ ಮಾಡಿರಬಹುದು. ಸೋಲಿಗೆ ವಿರೋಧಿ ಅಲೆಯೂ ಸಹ ಕಾರಣ. ಈಗ ನನ್ನ ಪರಿವಾಗಿ ಶಿಕ್ಷಕರು ಮತ ಚಲಾಯಿಸಿದ್ದಾರೆ. ಅದನ್ನ ನಾನು ಒಪ್ಪುವುದಿಲ್ಲ ಎಂದಷ್ಟೇ ಹೇಳಿದರು.
ಚುನಾವಣೆಯನ್ನು ರದ್ದು ಮಾಡಬೇಕು ಎಂಬ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರುಣ ಶಹಾಪುರ, ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ, ಅವರು ಹೇಳಿಕೆ ನೀಡಿರಬಹುದು. ಬೆಳಗಾವಿಗೆ ಬೆಳಗಾವಿಯ ಪ್ರತಿನಿಧಿಯೇ ಆಯ್ಕೆ ಆಗಬೇಕು ಎಂಬ ಶಿಕ್ಷಕರ ವಿಚಾರವಾಗಿತ್ತು. ಆದರೆ, ಅದು ಬೇರೆಯೇ ಆಗಿದೆ. ಈ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಇದೆ. ಆದರೆ, ಹಣದ ಹೊಳೆ ಹರಿದಿರುವುದೇ ನನ್ನ ಸೋಲಿಗೆ ಮೊದಲ ಕಾರಣ ಅನ್ನುವುದು ನನ್ನ ವಾದ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮುದಿ ಎತ್ತು ಮುದಿ ಎತ್ತು ಅಂತಾ ಪ್ರಕಾಶ ಹುಕ್ಕೇರಿ ಅವರಿಗೆ ಅಪಹಾಸ್ಯ ಮಾಡುತ್ತಿದ್ದಿರಿ, ಅದೇ ನಿಮಗೆ ಮುಳುವಾಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ ಅರುಣ್ ಶಹಾಪುರ, ಖಂಡಿತಾ ಅದು ಸತ್ಯ ಅಂತಾ ಒಪ್ಪಿಕೊಂಡರು. ಇದೇ ವೇಳೆ ಮಹಾಂತೇಶ ಕವಟಗಿಮಠ ಅವರಿಗೆ ಆದ ಅನ್ಯಾಯ ನಿಮಗೆ ಆಯ್ತಾ ಎಂಬ ಪ್ರಶ್ನೆಗೂ ಅವರು ಉತ್ತರಿಸಿದರು.
ಇದನ್ನೂ ಓದಿ: ವಾಯವ್ಯ ಶಿಕ್ಷಕರ ಕ್ಷೇತ್ರ ಗೆದ್ದು ಮೀಸೆ ತಿರುವಿದ ಹುಕ್ಕೇರಿ.. ಕಾಂಗ್ರೆಸ್ 'ಪ್ರಕಾಶ'ಮಾನ.. ಬಿಜೆಪಿಗಿಲ್ಲ 'ಅರುಣೋ'ದಯ..!