ಚಿಕ್ಕೋಡಿ: "ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷಕ್ಕೆ ಮೋಸ ಮಾಡಿ ಹೋಗಿದ್ದಾರೆ. ಅವರು ಬಿಟ್ಟು ಹೋಗಿದ್ದರಿಂದ ಈಗ ಪಕ್ಷ ಸ್ವಚ್ಛವಾಗಿದೆ. ಸವದಿ ಬಹಳಷ್ಟು ನಾಯಕರಿಗೆ ಮೋಸ ಮಾಡಿದ್ದಾರೆ. ಬಿ.ಎಲ್.ಪಾಟೀಲ್, ಲೀಲಾವತಿ ಆರ್.ಪ್ರಸಾದ್, ಸಂತೋಷ್, ದಿ.ಉಮೇಶ್ ಕತ್ತಿ ಅವರಿಗೆ ಮೋಸ ಮಾಡಿ ಸುಮ್ಮನೆ ಅಳುತ್ತಾರೆ" ಎಂದು ರಮೇಶ್ ಜಾರಕಿಹೊಳಿ ಹರಿಹಾಯ್ದರು.
ಅಥಣಿ ಪಟ್ಟಣದಲ್ಲಿಂದು ನಡೆದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಬುಟಾಳಿ ಹಾಗೂ ಕನ್ನಡ ಪರ ಹೋರಾಟಗಾರ ರವಿ ಪೂಜಾರಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹೇಶ್ ಕುಮಠಳ್ಳಿ ಹಾಗೂ ನನಗೆ ಮೋಸ ಆಗಿದೆ. ನಾವು ಪಕ್ಷ ನಿಷ್ಠೆಯಿಂದ ಪಕ್ಷದಲ್ಲಿದ್ದೇವೆ. ಆದರೆ ಲಕ್ಷ್ಮಣ್ ಸವದಿ ಎಲ್ಲ ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋಗಿದ್ದಾರೆ. ಮತದಾರರು ಅವರನ್ನು ನೀವು ನಂಬಬೇಡಿ. ನೀವು ಅವನಿಗೆ ದಯವಿಟ್ಟು ಬುದ್ದಿ ಕಲಿಸಬೇಕು ಎಂದರು.
ಎಷ್ಟು ಖರ್ಚು ಮಾಡಿಯಾದರೂ ಸರಿ, ನೀವು ಮಾತ್ರ ಅವನಿಗೆ ತಕ್ಕ ಉತ್ತರ ನೀಡಬೇಕು. ಈ ವಾರದಲ್ಲಿ ಐದನೇ ಸಲ ಅಥಣಿಗೆ ಭೇಟಿ ನೀಡುತ್ತಿದ್ದೇನೆ. ಸೊಕ್ಕಿನ ಮನುಷ್ಯನ ಸೋಲು ಕಾಣಬೇಕು. ಉದ್ದ ಅಂಗಿ, ಗಿಡ್ಡ ಆಗಬೇಕು. ಅಥಣಿ ಜನತೆ ಶಕ್ತಿಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟರು.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ತನಿಖೆ: 2018 ರಿಂದ ಸವದಿ ಎಲ್ಲ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾನೆ. ನಾವು ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ಮೇಲಿನ ಪೀಡೆ ಹೋಗಿದೆ. ಅಥಣಿ ಭಾಗದ ಸಹಕಾರ ಸೊಸೈಟಿ ಗಳಲ್ಲಿ ತುಂಬಾ ಅವ್ಯವಹಾರ ಆಗಿದೆ. ನಾವು ಅಧಿಕಾರಕ್ಕೆ ಬಂದ್ರೆ ತನಿಖೆ ಮಾಡಲಾಗುವುದು. ಡಿಸಿಸಿ ಬ್ಯಾಂಕ್ ಆಯ್ಕೆ ಸಂದರ್ಭದಲ್ಲಿ ಅವನನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಎಲ್ಲ ಸಹಕಾರಿ ಸಂಘಗಳಿಗೆ ಮತ್ತೊಮ್ಮೆ ಚುನಾವಣೆ ಮಾಡಲಾಗುವುದು. ಆತ ದೊಡ್ಡ ಮನುಷ್ಯ ಎಂದು ಭಯ ಪಟ್ಟಿದ್ದೆ. ಆದರೆ ಬೋಗಸ್ ಇದ್ದಾನೆ ಎಂದು ಅರ್ಥವಾಯ್ತು ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಲಿಂಗಾಯತ ಮತಗಳನ್ನು ಸೆಳೆಯಲು ಶೆಟ್ಟರ್ಗೆ ಟಾಸ್ಕ್ ಕೊಟ್ಟ 'ಕೈ': ಶೆಟ್ಟರ್ ಹಣಿಯಲು ಆರ್ಎಸ್ಎಸ್ ರಣತಂತ್ರ..