ಅಥಣಿ (ಬೆಳಗಾವಿ): ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ತೆರವುಗೊಳಿಸಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮರು ಸ್ಥಾಪಿಸುವಂತೆ ಒತ್ತಾಯಿಸಿ ಹಾಲುಮತ ಸಮಾಜ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಾದಯಾತ್ರೆ ಮೂಲಕ ಅಥಣಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಹಾಲುಮತ ಸಮಾಜದ ಕಾರ್ಯಕರ್ತರು, ನಾಲ್ಕು ದಿನಗಳಲ್ಲಿ ಪುತ್ಥಳಿ ಮರುಸ್ಥಾಪನೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪೀರನವಾಡಿ ಗ್ರಾಮದಲ್ಲಿನ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ರಾಯಣ್ಣನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಹಾಲುಮತ ಸಮಾಜದ ಮುಖಂಡ ಸತ್ಯಪ್ಪ ಬಾಗೆನ್ನವರ ಒತ್ತಾಯಿಸಿದರು.
ಪ್ರಶಾಂತ ಪೂಜಾರಿ ಎಂಬುವವರು ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಮರು ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಭರವಸೆ ಕೊಟ್ಟಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಭಕ್ತ ರಾಯಣ್ಣನಿಗಾಗಿ ನಾವು ಪ್ರಾಣವನ್ನು ಕೂಡ ಕೊಡಲು ಸಿದ್ಧರಿದ್ದೇವೆ. ನಾಲ್ಕು ದಿನಗಳ ಅವಧಿಯಲ್ಲಿ ಮೂರ್ತಿ ಸ್ಥಾಪನೆ ಮಾಡದಿದ್ದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.