ಚಿಕ್ಕೋಡಿ: ಇಟಲಿಯಿಂದ ಬಂದ ಸೋನಿಯಾ ಗಾಂಧಿ ಭಾರತದ ಪೌರತ್ವ ಪಡೆದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಸಹ ಆಗಿದ್ದಾರೆ. ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದವರು ಭಾರತ ಬಿಟ್ಟು ಬೇರೆ ಎಲ್ಲಿಗೆ ಹೋಗಲು ಸಾಧ್ಯ ಎಂದು ಕೇಂದ್ರ ಆರ್ಥಿಕ ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪೌರತ್ವ ಕಾಯ್ದೆ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಿಎಎ ಬಗ್ಗೆ ತಪ್ಪು ಸಂದೇಶಗಳನ್ನು ಹಬ್ಬಿಸಲಾಗುತ್ತಿದೆ. ಪೌರತ್ವ ನೀಡುವ ಕಾನೂನನ್ನು ತರುತ್ತಿದ್ದೇವೆ ಹೊರೆತು ಪೌರತ್ವ ಹರಣ ಮಾಡುವಂತ ಕಾನೂನು ಅಲ್ಲ. ಈ ಕಾನೂನಿನಿಂದ ದೇಶದ ಯಾವುದೇ ಪ್ರಜೆಗಳಿಗೆ ಅನ್ಯಾಯವಾಗುವುದಿಲ್ಲ ಎಂದರು.
ಸ್ವಾತಂತ್ರ ಬಂದ ವರ್ಷದಲ್ಲಿಯೂ ಪೌರತ್ವದ ಬಗ್ಗೆ ಬಹಳ ಚರ್ಚೆಗಳು ನಡೆದಿದ್ದವು. ಆಗ, ಪಾಕಿಸ್ತಾನದಲ್ಲಿ ಮಹಿಳೆಯರನ್ನು ಅತ್ಯಾಚಾರಗೈದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು. ಹಿಂದೂಸ್ಥಾನದಲ್ಲಿ ಅಂತಹ ಒಂದೇ ಒಂದು ಘಟನೆಗಳು ಇದುವರೆಗೂ ನಡೆದಿಲ್ಲ. ಒಂದು ವೇಳೆ ನಡೆದಿದ್ದರೇ ಹೇಳಿ ಎಂದು ಸವಾಲು ಹಾಕಿದರು.
ಭಾರತದಲ್ಲಿ ಮಾತ್ರವೇ ಎಲ್ಲರಿಗೂ ಸಮಾನ ಅವಕಾಶವಿದೆ. ಇಟಲಿಯಿಂದ ಬಂದ ಸೋನಿಯಾ ಗಾಂಧಿ ಈ ದೇಶದ ಪೌರತ್ವ ಪಡೆದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಸಹ ಆಗಿದ್ದಾರೆ. ಇಲ್ಲಿ ಜಾತಿ- ಮತ ಪಂಥಗಳನ್ನು ನೋಡುವುದಿಲ್ಲ. ಕೇವಲ ತಿರಂಗ ಧ್ವಜವನ್ನು ಮಾತ್ರ ನೋಡುತ್ತೇವೆ. ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಸಿಕ್ಕಾಗ 23 ಪ್ರತಿಶತದಷ್ಟು ಜನ ಹಿಂದೂಗಳಿದ್ದರು. ಈಗ ಕೇವಲ 3 ಪ್ರತಿಶತದಷ್ಟು ಮಾತ್ರ ಇದ್ದಾರೆ. ಆದರೆ, ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಬೆಳೆದಿದೆ. ಹಾಗಾದರೆ, ಶೋಷಣೆ ಎಲ್ಲಿ ಆಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪಘಾನಿಸ್ತಾನಲ್ಲಿ ದೌರ್ಜನ್ಯಕ್ಕೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರು ಭಾರತ ಬಿಟ್ಟು ಬೇರೆ ಎಲ್ಲಿಗೆ ಹೋಗಲು ಸಾಧ್ಯವಿದೆ. ಈ ಹಿಂದೆ ಗಾಂಧೀಜಿ ಅವರು ಹೇಳಿದ್ದ ಮಾತನ್ನು ಇಂದು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಬರೀ ಅಂಹಿಸೆ, ಅನ್ಯಾಯ, ಅಕ್ರಮ ತುಂಬಿರುವ ಜಾಗದಲ್ಲಿ ಯಾರಾದರು ಇರಲು ಬಯಸುತ್ತಾರಾ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸುಳ್ಳು ಹೇಳುವುದನ್ನು ನೋಡಿದರೆ ಮುಂದೊಂದು ದಿನ ಅದರಲ್ಲಿ ಗಿನ್ನಿಸ್ ದಾಖಲೆ ಮಾಡುತ್ತಾರೆ ಎಂದು ಠಾಕೂರ್ ವ್ಯಂಗ್ಯವಾಡಿದರು.
ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಪೌರತ್ವ ಕಾಯ್ದೆದೆ ಜಾರಿಗಾಗಿ ಶ್ರಮಿಸಿದ್ದರು. ಮನಮೋಹನ್ ಸಿಂಗ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಈಗ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಮಾಜವನ್ನು ಒಡೆಯುವುದು ನಮ್ಮ ಕೆಲಸವಲ್ಲ. ಸಮಾಜವನ್ನು ಒಗೂಡಿಸಿ ದೇಶದ ಅರ್ಥವ್ಯವಸ್ಥೆಯನ್ನು ಮುಂದೆಕ್ಕೆ ತರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಜೆಎನ್ಯು ವಿದ್ಯಾರ್ಥಿಗಳು ದೇಶವನ್ನು ತುಂಡು ತುಂಡು ಮಾಡುತ್ತೇವೆ ಎನ್ನುತ್ತಾರೆ. ನಾವು ಧರ್ಮದ ಆಧಾರದ ಮೇಲೆ ಮತ ಕೇಳುವುದಿಲ್ಲ. 70 ವರ್ಷಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ಕಾಂಗ್ರೆಸ್ ಕೊಟ್ಟಿದ್ದು ಏನು? ಕೇವಲ ಮತಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿದೆ. ನಾವು ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸ ಮಾಡುತ್ತಿದ್ದೇವೆ. ಎಂತಹ ಪರಿಸ್ಥಿತಿಯಲ್ಲೂ ಭಾರತವನ್ನು ತುಂಡು ತುಂಡು ಮಾಡಲು ಅವಕಾಶಕೊಡುವುದಲ್ಲ ಎಂದರು.