ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬ ಚಿಕಿತ್ಸೆಗಾಗಿ ಪರದಾಡಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಗಾಂಧಿನಗರದ ವೃದ್ಧನಿಗೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆ ಆಗಿದೆ. ಈ ವೇಳೆ ರೋಗಿಯ ಪುತ್ರಿ ಸ್ಕೂಟಿ ಮೇಲೆಯೇ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ, ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಫಾರ್ಮ್ ತುಂಬಿಕೊಂಡು ಬನ್ನಿ ಎಂದಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆ ಇರುವ ವೃದ್ಧನಿಗೆ ಕೊರೊನಾ ಶಂಕೆ ಹಿನ್ನೆಲೆ ಅವರನ್ನು ಸ್ಕೂಟಿ ಮೇಲೆ ಪುತ್ರಿ ಕರೆದುಕೊಂಡು ಬಂದಿದ್ದಾರೆ. ಆದ್ರೆ, ವೃದ್ಧನನ್ನ ಆಸ್ಪತ್ರೆ ಒಳಗೆ ಸೇರಿಸಿಕೊಳ್ಳದಿರುವ ಹಿನ್ನೆಲೆ ಸ್ಕೂಟಿ ಮೇಲೆಯೇ ಕೂರಿಸಿದ್ದಾರೆ. ಬಳಿಕ ವೃದ್ಧನ ಮಗಳು ತಂದೆಯನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಅಂಗಲಾಚಿದರೂ ಪ್ರಯೋಜವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಿಲ್ಲಲು ಆಗದ ವೃದ್ಧ ರಸ್ತೆ ಮೇಲೆಯೇ ಇದ್ದ ಮಗಳ ಸ್ಕೂಟಿ ಮೇಲೆ ಕುಳಿತುಕೊಂಡರು. ಆದ್ರೆ, ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಇತ್ತ ತಿರುಗಿಯೂ ನೋಡಲಿಲ್ಲವಂತೆ. ಇದೇ ರೀತಿ ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಬಂದು ರೋಗಿಗಳು ಪರದಾಡಿದ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.