ಬೆಳಗಾವಿ: ಬಳ್ಳಾರಿ ನಾಲಾ ರಭಸದ ಪ್ರವಾಹಕ್ಕೆ ಆಂಧ್ರಪ್ರದೇಶ ಮೂಲದ ಗುತ್ತಿಗೆದಾರನೊಬ್ಬ ಕೊಚ್ಚಿಹೋಗಿದ್ದಾನೆ.
ಜಯಚಂದ್ರ ಎಂಬಾತ ರೈಲ್ವೆ ಇಲಾಖೆಯ ಗುತ್ತಿಗೆದಾರನಾಗಿದ್ದು, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಲು ಬೆಳಗಾವಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಇಲ್ಲಿ ಸುರಿಯುತ್ತಿರುವ ಮಳೆಯಿಂದ ರಭಸವಾಗಿ ಹರಿಯುತ್ತಿರುವ ಬಳ್ಳಾರಿ ನಾಲಾಗೆ ಕಾರು ಸಹಿತ ಕೊಚ್ಚಿಹೋಗಿ ಜಯಚಂದ್ರ ಮೃತಪಟ್ಟಿದ್ದಾನೆ.
ಇಂದು ಸಂಜೆ ಬೆಳಗಾವಿ ಹೊರವಲಯದ ವಿಟಿಯು ಬಳಿ ಮೃತದೇಹ ಪತ್ತೆಯಾಗಿದೆ. ಬೆಳಗಾವಿಯ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು, ಸಚಿವ ಸುರೇಶ್ ಅಂಗಡಿ ನೆರೆ ಪರಿಸ್ಥಿತಿ ಅವಲೋಕನ ಮಾಡಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜತೆಗೆ ತೆರಳಿದ್ದರು. ಸಚಿವ ಅಂಗಡಿ ಇಲ್ಲದ ಕಾರಣ ಗುತ್ತಿಗೆದಾರ ಜಯಚಂದ್ರ ಗೋವಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.