ಚಿಕ್ಕೋಡಿ: ಆರು ಬಾರಿ ಶಾಸಕ, ಒಮ್ಮೆ ಸಂಸದರಾಗಿ ಪ್ರಬಲವಾಗಿದ್ದ ಪ್ರಕಾಶ್ ಹುಕ್ಕೇರಿಗೆ ಉದ್ಯಮಿ ಅಣ್ಣಾ ಸಾಹೇಬ್ ಜೊಲ್ಲೆ ಪೆಟ್ಟು ಕೊಟ್ಟಿದ್ದಾರೆ. ಕಳೆದ ಬಾರಿ ಪಕ್ಷಕ್ಕೆ ಆದ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಮೂಲಕ ತಂದೆ ಹಾಗೂ ಪುತ್ರನ ಎದುರಿನ ಸೋಲಿಗೆ ತಕ್ಕ ಉತ್ತರವನ್ನ ನೀಡಿದ್ದಾರೆ ಜೊಲ್ಲೆ.
ಚಿಕ್ಕೋಡಿ ಸಂಸದರಾಗಿದ್ದ ಪ್ರಕಾಶ ಹುಕ್ಕೇರಿ ಅವರನ್ನ ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಅಣ್ಣಾ ಸಾಹೇಬ್ ಜೊಲ್ಲೆ ಚಿಕ್ಕೋಡಿ ಎಂಪಿ ಆಗಿ ವಿಜಯ ಪತಾಕೆ ಹಾರಿಸಿದ್ದಾರೆ. ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಕಾಶ್ ಹುಕ್ಕೇರಿಗೆ ಮುಖಭಂಗವನ್ನುಂಟು ಮಾಡಿದ್ದಾರೆ. ರಾಹುಲ್ಗಾಂಧಿ, ಸಿದ್ದರಾಮಯ್ಯ ಹಾಗೂ ಸ್ವತಃ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಪ್ರಕಾಶ್ ಹುಕ್ಕೇರಿಗೆ ಈ ಮೂಲಕ ಹಿನ್ನಡೆಯೂ ಆಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಕ್ಕೇರಿ ಪುತ್ರನ ವಿರುದ್ಧಸೋಲು ಕಂಡಿದ್ದ ಜೊಲ್ಲೆ ಈ ಬಾರಿ ತಂದೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಅಣ್ಣಾಸಾಹೇಬ್ ಜೊಲ್ಲೆ, ದಶಕಗಳಿಂದ ರಾಜಕೀಯ ಪ್ರವೇಶದ ಕನಸು ನನಸು ಮಾಡಿಕೊಂಡಿದ್ದಾರೆ.
ಮೋದಿ ಅಲೆಯೇ ದಡ ಸೇರಿಸಿತಾ?:
ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದಲ್ಲಿ ಮಾತ್ರ ಹುಕ್ಕೇರಿ ಜನಪರ ಕೆಲಸಗಳನ್ನ ಮಾಡಿ ಉಳಿದ ಏಳು ವಿಧಾನಸಭಾ ಕ್ಷೇತ್ರಗಳನ್ನ ಕಡೆಗಣನೆ ಮಾಡಿದ್ದೇ ಜೊಲ್ಲೆ ಗೆಲುವಿಗೆ ಸಹಕಾರಿ ಆಯ್ತು ಎನ್ನಲಾಗಿದೆ. ಇನ್ನು ಚಿಕ್ಕೋಡಿಗೆ ಭೇಟಿ ನೀಡಿದ್ದ ಮೋದಿ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಗೆ ಮತ ನೀಡುವಂತೆ ಕನ್ನಡದಲ್ಲೇ ಭಾಷಣ ಆರಂಭಿಸಿ ಕೊನೆಗೊಳಿಸುವ ಮೂಲಕ ಹವಾ ಎಬ್ಬಿಸಿದ್ದರು. ಇದು ಸಹ ಪ್ರಯೋಜನಕ್ಕೆ ಬಂದಿದೆ.
ಯುವಕರಿಗೆ ಕೆಲಸ ನೀಡಿದ್ದು ವರ್ಕೌಟ್!:
ಅಣ್ಣಾಸಾಬ ಜೊಲ್ಲೆ ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಉದ್ಯಮಿಯಾಗಿ ಸಾವಿರಾರು ಯುವಕರಿಗೆ ಕೆಲಸ ನೀಡಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದು, ಈ ಚುನಾವಣೆಯಲ್ಲಿ ಪ್ರಯೋಜನಕ್ಕೆ ಬಂದಿದೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಜೊಲ್ಲೆ ಮುಂದಿವೆ ಹಲವು ಸವಾಲುಗಳು:
ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಸಾಕಷ್ಟು ಸವಾಲುಗಳಿವೆ. ಮುಖ್ಯವಾಗಿ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತುವುದರಿಂದ ನದಿ ಭಾಗದ ಜನರಿಗೆ ನೀರಿನ ಅನುಕೂಲ ಮಾಡಿಕೊಡಬೇಕಿದೆ. ಇನ್ನು ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಚಿಕ್ಕೋಡಿಯನ್ನ ಪ್ರತ್ಯೇಕ ಜಿಲ್ಲಾ ಕೇಂದ್ರವನ್ನ ಮಾಡುವ ಜವಾಬ್ದಾರಿ ಇದೆ.