ಬೆಳಗಾವಿ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿ ಶಾಸಕ ಅನಿಲ್ ಬೆನಕೆ ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರಮುಖ ನೀರಿನ ಮೂಲವೇ ರಕ್ಕಸಕೊಪ್ಪ ಜಲಾಶಯವಾಗಿದ್ದು, ಅದೀಗ ಬರಿದಾಗಿದೆ. ಇರುವ ನೀರಿನಲ್ಲಿ ನಗರಕ್ಕೆ ಎಷ್ಟು ದಿನ ನೀರು ಸರಬರಾಜು ಮಾಡಬಹುದು ಎಂದು ಶಾಸಕರು ನೀರಾವರಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ.
ನಂತರ ಮಾತನಾಡಿದ ಬೆನಕೆ, ಸದ್ಯ ಜಲಾಶಯದಲ್ಲಿ ಇರುವ ನೀರಿನ ಮಟ್ಟ ಕಡಿಮೆಯಾಗಿದ್ದು. ಬರುವ ಜೂನ್ ವರೆಗೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಕಸ್ಮಾತ್ ಮಳೆಯಾಗದೇ ಇದ್ದರೆ ನೀರು ಸಿಗುವುದು ಕಷ್ಟ ಎಂದರು.
ಪ್ರತಿ ವರ್ಷವೂ ಬೇಸಿಗೆಯಲ್ಲಿ ಬೆಳಗಾವಿ ನಗರಕ್ಕೆ ನೀರಿನ ಅಭಾವ ಕಂಡುಬರುತ್ತದೆ. ಈ ಬಾರಿ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಅಭಾವ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ.