ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 38 ರಿಂದ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಅಜಿಂ ಪಟವೇಕರ್ ಬೆಂಬಲಿಗರು, ಸೋತ ಮಹಿಳಾ ಅಭ್ಯರ್ಥಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
37 ವಾರ್ಡ್ಗೆ ಪಕ್ಷೇತರ ಅಭ್ಯರ್ಥಿಯಾಗಿ ಸಲೀಮಾ ಗೋಕಾಕವಾಲೆ ಎಂಬುವರು ಸ್ಪರ್ಧೆ ಮಾಡಿ ಸೋಲುಂಡಿದ್ದು, ಇದೇ ವಾರ್ಡ್ನಲ್ಲಿ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕೂಡ ಸೋಲುಂಡಿದ್ದಾರೆ, ಇವರಿಗೆ ಅಜೀಂ ಪಟವೇಕರ್ ಬೆಂಬಲ ನೀಡಿದ್ದರು. ಈ ಹಿನ್ನೆಲೆ ಪಟವೇಕರ್ ಬೆಂಬಲಿಗರು ನಮ್ಮ ಅಭ್ಯರ್ಥಿ ಸೋಲಿಗೆ ಗೋಕಾಕವಾಲೆ ಕಾರಣ ಎಂದು ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿ ಆಗಿದ್ದಾರೆ.
ಪುಂಡರ ದಾಳಿಗೆ ಕಿಟಕಿ ಗಾಜುಗಳು ಜಖಂಗೊಂಡಿವೆ. ಈ ಕುರಿತು ಮಾತನಾಡಿರುವ ಮಹಿಳೆ, ಅಜೀಂ ಪಟವೇಕರ್ ಬೆಂಬಲಿತ ಅಭ್ಯರ್ಥಿ ಸೋಲಿಗೆ ನಾನೇ ಕಾರಣ ಅಂದುಕೊಂಡು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಮತದಾನದ ದಿನವೂ ಕೂಡ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.