ಬೆಳಗಾವಿ: ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿ ಸೇರಿ, ಆತನಿಗೆ ಕಳ್ಳತನಕ್ಕೆ ಸಹಾಯ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಳಿಯಿದ್ದ 2,65,300 ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ವಡಗಾಂವ ಗಲ್ಲಿಯ ಗುದೇವ ನಿವಾಸಿ ಪರಶುರಾಮ ದಂಡಗಲ್ಲ ಬಂಧಿತ ಆರೋಪಿ. ಈತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಖಾಸಬಾಗನ ಶ್ರೀ ಸಾಯಿನಾಥ್ ಜ್ಯುವೆಲ್ಲರಿ ಮಾಲೀಕ ವಿನಯ್ ಅನ್ವೇಕರನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾರ್ಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಸುರೇಶ ಪಿ.ಶಿಂಗಿ ನೇತೃತ್ವದಲ್ಲಿ ತಮ್ಮ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಆಗ ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡದುಕೊಳ್ಳಲಾಗಿದೆ. ಇದರ ಜೊತೆಗೆ ಕಳ್ಳತನ ಮಾಡಿದ ಎಲ್ಲ ಚಿನ್ನಾಭರಣಗಳನ್ನು ಬಂಗಾರದ ಅಂಗಡಿ ಮಾಲೀಕ ವಿನಯ ಎಂಬುವವರಿಗೆ ನೀಡುತ್ತಿದ್ದ ಎನ್ನಲಾಗಿದೆ. ಆತನ ಹತ್ತಿರವಿದ್ದ 79 ಗ್ರಾಂ ಬಂಗಾರ ಹಾಗೂ 135 ಗ್ರಾಂ ಬೆಳ್ಳಿ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.