ಬೆಳಗಾವಿ: ಮಹಾನಗರ ಪಾಲಿಕೆ ಚಿರಶಾಂತಿ ಆ್ಯಂಬುಲೆನ್ಸ್ ವಾಹನ ಚಾಲಕ ನಸೀರ್ ಅಹ್ಮದ್ ಮಹಾನಗರ ಪಾಲಿಕೆ ವ್ಯಾಪ್ತಿಯಡಿ ಬರುವ ಚಿರಶಾಂತಿ ವಾಹನದ ಚಾಲಕ. ಈತ ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 36 ಸಾವಿರಕ್ಕೂ ಹೆಚ್ಚಿನ ಹಿಂದೂಗಳ ಶವಗಳನ್ನು ಸ್ಮಶಾನಗಳಿಗೆ ಸಾಗಿಸುವ ಮೂಲಕ ಶವಗಳಿಗೆ ಮುಕ್ತಿ ನೀಡಿದ್ದಾರೆ.
ಕಳೆದ 12 ವರ್ಷಗಳಿಂದ ಆ್ಯಂಬುಲೆನ್ಸ್ ಚಾಲಕರಾಗಿ ಇವರು ಕೆಲಸ ಮಾಡುತ್ತಿದ್ದು, ಕೊರೊನಾ ಹಾವಳಿ ಇದ್ದರೂ ಕೆಲಸದಿಂದ ವಿಮುಖರಾಗಿಲ್ಲ. ಇದು ನಮ್ಮ ಕರ್ತವ್ಯವೆಂದು ಸೇವೆ ಮಾಡುತ್ತಿದ್ದಾರೆ. ತಮಗೂ ಅಗತ್ಯ ಕಿಟ್ ನೀಡುವ ಮೂಲಕ ಜಿಲ್ಲಾಡಳಿತ ಬೆಂಬಲಕ್ಕೆ ನಿಲ್ಲಬೇಕೆಂದು ಹಲವು ಬಾರಿ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಸಾರ್ವಜನಿಕರು ಮೃತಪಟ್ಟಾಗ ಅವರ ಅಂತ್ಯ ಸಂಸ್ಕಾರ ಮುಗಿಯುವವರೆಗೂ ಅಲ್ಲಿದ್ದು, ಮನೆಗೆ ಹೋಗುವಾಗ ಒಮ್ಮೊಮ್ಮೆ ರಾತ್ರಿ ಎರಡು ಗಂಟೆ ಆಗಿರುತ್ತದೆ. ಇದರಿಂದಾಗಿ ಮನೆಯವರೂ ಭಯ ಪಡುತ್ತಿದ್ದಾರೆ. ಹೀಗಾಗಿ ಮನೆಯವರಿಗೆ ಧೈರ್ಯ ತುಂಬಿ ನಾವು ನಮ್ಮ ಕೆಲಸದಲ್ಲಿ ನಿರತರಾಗುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ 36 ಸಾವಿರಕ್ಕೂ ಹೆಚ್ಚಿನ ಶವಗಳನ್ನು ಸಾಗಿಸಿರುವ ಸಾರ್ಥಕ ಭಾವನೆ ನನ್ನಲ್ಲಿದೆ ಎಂದು ನಸೀರ್ ಅಹ್ಮದ್ ಹೇಳಿದ್ದಾರೆ.
ಮಹಾನಗರ ವ್ಯಾಪ್ತಿಯಲ್ಲಿ ಪ್ರತಿದಿನ 10 ರಿಂದ 20 ಸಾವುಗಳು ಸಂಭವಿಸುತ್ತಿವೆ. ಆದ್ರೆ, ಮಹಾನಗರ ಪಾಲಿಕೆ ಮಾತ್ರ ಆ್ಯಂಬುಲೆನ್ಸ್ ಚಾಲಕರನ್ನು ಕಡೆಗಣಿಸಿದೆ. ಈವರೆಗೆ ಪಾಲಿಕೆ ಚಿರಶಾಂತಿ ವಾಹನ ಚಾಲಕರಿಗೆ ಪಿಪಿಇ ಕಿಟ್ಗಳು ಸೇರಿದಂತೆ ಅಗತ್ಯ ಸುರಕ್ಷಾ ವಸ್ತುಗಳನ್ನು ನೀಡಿಲ್ಲ. ಇದರಿಂದಾಗಿ ಮನೆಗೆ ಹೋಗಬೇಕಾದ್ರೆ ಜೀವ ಭಯದಲ್ಲಿ ಹೋಗುವಂತಾಗಿದೆ. ಕೆಲಸಕ್ಕೆ ಹೋಗಲಿಲ್ಲಂದ್ರೆ ತುತ್ತಿನ ಚೀಲಕ್ಕೆ ಪರದಾಡಬೇಕಾಗುತ್ತದೆ. ಇದರಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಗಮನ ಹರಿಸಬೇಕು ಎಂಬುದು ಆ್ಯಂಬುಲೆನ್ಸ್ ಚಾಲಕರ ಮನವಿ.