ಬೆಳಗಾವಿ : ತಾಲೂಕಿನ ಸುವರ್ಣ ಸೌಧದ ಮುಂಭಾಗದಲ್ಲಿ ಕೆಎಸ್‌ಆರ್‌ಪಿ ಉತ್ಸವದ ಅಂಗವಾಗಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ ಕುಮಾರ್ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೈಕಲ್ ಜಾಥಾ ಸುವರ್ಣ ವಿಧಾನಸೌಧದಿಂದ ಪ್ರಾರಂಭವಾಗಿ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಕಿಲ್ಲಾ ಕೋಟೆಯ ಮುಂಭಾಗದಿಂದ ಸಂಗೊಳ್ಳಿ ರಾಯಣ್ಣನ ವೃತ್ತದ ಮೂಲಕ, ರಾಣಿ ಚನ್ನಮ್ಮ ವೃತ್ತದಲ್ಲಿ ವೀರರಾಣಿ ಚನ್ನಮ್ಮಾಜೀಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಾಲೇಜು ರಸ್ತೆಯ ಮೂಲಕ ಕಾಂಗ್ರೆಸ್ ರಸ್ತೆ, ಉದ್ಯಮ ಭಾಗ ಮೂಲಕ ಪೀರನವಾಡಿ ಮಾರ್ಗವಾಗಿ ಕೆಎಸ್‌ಆರ್‌ಪಿ 2ನೇ ಪಡೆಯ ಆವರಣವನ್ನು ತಲುಪಿತು.
ಸೈಕಲ್ ಜಾಥಾದಲ್ಲಿ ಬೆಳಗಾವಿ ನಗರದ ಕೆಎಸ್‌ಆರ್‌ಪಿ, ಜಿಲ್ಲಾ ಪೊಲೀಸ್ ತರಬೇತಿ ಶಾಲೆಗಳು, ಬೆಳಗಾವಿಯ ಸಂಘ-ಸಂಸ್ಥೆಗಳಾದ ಜಿಲ್ಲಾ ಸೈಕ್ಲಿಂಗ್ ಕ್ಲಬ್, ಬೆಳಗಾವಿಯ ಎನ್‌ಸಿಸಿ ವಿಭಾಗ, ಕೆಎಸ್‌ಐಎಸ್‌ಎಫ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಸಿಆರ್‌ಪಿಎಫ್ ಕೋಬ್ರಾ, ಐಟಿಬಿಟಿ ತರಬೇತಿ ಶಾಲೆ, ಮ್ಯಾರಾಥಾನ್ ಬಾಯ್ಸ್, ಬೆಳಗಾವಿ ಪೆಡ್ರರ್ಸ್ ಕ್ಲಬ್, ಡಿವೈನ್ ಮರ್ಸಿ ಶಾಲೆ, ಸಿಎಂಎ-ಐಎಎಸ್ ತರಬೇತಿ ಅಕಾಡೆಮಿ, ವೇಣು ಗ್ರಾಮ್ ಸೈಕಲ್ ಕ್ಲಬ್ ಸೇರಿ ಹೋಮ್ ಗಾರ್ಡ್ ಸಿಬ್ಬಂದಿ ಹಾಗೂ ಕ್ರೀಡಾ ಪ್ರೇಮಿಗಳು ಸೇರಿ ಸುಮಾರು 450ಕ್ಕೂ ಅಧಿಕ ಜನರು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು.
ಓದಿ:ಇನ್ನೂ ಸಿಗದ ನೆರೆ ಪರಿಹಾರ: ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ
ಇದೇ ವೇಳೆ ಮಾತನಾಡಿದ ಅಲೋಕ್ ಕುಮಾರ್, ಉದ್ಯೋಗ ಇನ್ನಿತರ ಕಾರ್ಯ ಚಟುವಟಿಕೆಗಳಿಂದ ನಾಗರಿಕರಿಗೆ ಯೋಗ, ಮನಶಾಂತಿ ದೊರೆಯುತ್ತಿಲ್ಲ. ನಿರಂತರ ಕೆಲಸದಿಂದ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಸದೃಢ ಆರೋಗ್ಯಕ್ಕಾಗಿ ನಿತ್ಯವೂ ನಾಲ್ಕೈದು ಕಿಲೋಮೀಟರ್ ಸೈಕಲ್ ಜೊತೆ ಗೆಳೆತನ ಬೆಳೆಸಬೇಕು.
ಜೀವನದಲ್ಲಿ ನಾವು ಅತೀ ಹೆಚ್ಚು ಸೈಕಲ್ ಬಳಕೆ ಮಾಡುವುದರಿಂದ ಆರೋಗ್ಯ, ಪರಿಸರ ರಕ್ಷಣೆಗೂ ಒಳ್ಳೇ ಅನುಕೂಲ, ವಿಪರೀತ ವಾಹನಗಳ ಹಾವಳಿಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ.
ಶುದ್ಧ ಗಾಳಿಯಲ್ಲಿ ವಿಷಪೂರಿತ ಗಾಳಿ ಸೇರ್ಪಡೆಗೊಂಡು ವಾಯುಮಾಲಿನ್ಯ ಆಗುತ್ತಿದೆ. ಇದನ್ನು ನಿಯಂತ್ರಿಸೋದು ನಮ್ಮ ಯುವಕರ ಕೈಯಲ್ಲಿದೆ, ಆರೋಗ್ಯವಂತ ವಾತಾವರಣ ನಿರ್ಮಾಣಕ್ಕೆ ಇಂದಿನಿಂದ ನೀವೆಲ್ಲ ಪಣ ತೊಡಬೇಕಂದು ಕರೆ ನೀಡಿದರು.