ಬೆಳಗಾವಿ: ಒಂದು ಕಡೆ ತಮ್ಮದೇ ಸರ್ಕಾರದ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಮುನಿಸು ದೊಡ್ಡ ಸಂಚಲನ ಸೃಷ್ಟಿಸಿದರೆ, ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್ಗೆ ಹುನ್ನಾರ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ಇದರಿಂದ ಇಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಹೀಗೊಂದು ಅನುಮಾನ ದಟ್ಟವಾಗಲು ಕಾರಣ, ಪಾಲಿಕೆ ಮೆಯರ್ ಶೋಭಾ ಸೋಮನಾಚೆ ಅವರು. ಅಕ್ಟೋಬರ್ 17 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ. ಬೆಳಗಾವಿ ಪಾಲಿಕೆ ಆಯುಕ್ತರು, ಕಂದಾಯ ಶಾಖೆ ಉಪ ಆಯುಕ್ತರು ಮತ್ತು ಪರಿಷತ್ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಮೂವರು ಅಧಿಕಾರಿಗಳು ತಿರುಚಿ ವರದಿ ಕೊಟ್ಟಿದ್ದಾರೆ ಎಂದು ಮೇಯರ್ ಆರೋಪಿಸಿದ್ದಾರೆ.
ಸರ್ಕಾರ ಆಸ್ತಿ ಕರ ಪರಿಷ್ಕರಣೆ ಬಗ್ಗೆ ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ನೋಟಿಸ್ ಕೊಟ್ಟಿತ್ತು. ಈ ನೋಟಿಸ್ ನಲ್ಲಿ ಯಾಕೆ ಸೂಪರ್ ಸೀಡ್ ಮಾಡಬಾರದೆಂದು ಎಚ್ಚರಿಕೆ ಕೂಡ ನೀಡಿತ್ತು. ಆದರೆ, 16-9-2023ರ ಪಾಲಿಕೆ ಸಾಮಾನ್ಯ ಸಭೆಯಲ್ಲಿ 2023/24ನೇ ಸಾಲಿನ ಆಸ್ತಿ ಕರ ಹೆಚ್ಚಳ ಕುರಿತು ಠರಾವು ಪಾಸ್ ಮಾಡಲಾಗಿತ್ತು. ಆದರೂ ಈ ಅಧಿಕಾರಿಗಳು ದುರುದ್ದೇಶದಿಂದ ಸರ್ಕಾರಕ್ಕೆ ಖೊಟ್ಟಿ ದಾಖಲೆ ಸೃಷ್ಟಿಸಿ ವರದಿ ಸಲ್ಲಿಸಿದ್ದು, ಬೆಳಗಾವಿ ಪಾಲಿಕೆ 2024/25ನೇ ಸಾಲಿಗೆ ಆಸ್ತಿ ಕರ ಹೆಚ್ಚಳ ಮಾಡಿದೆ ಎಂದು ಸಾಮಾನ್ಯ ಸಭೆಯ ಠರಾವು ತಿರುಚಿದ್ದಾರೆ. ಮೇಯರ್ಗೆ ಕನ್ನಡ ಭಾಷೆ ಬಾರದೆ ಇರುವುದನ್ನೇ ದುರುಪಯೋಗ ಪಡಿಸಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಹಾಗಾಗಿ ಈ ಮೂವರು ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತು ಜರುಗಿಸಬೇಕು. ಅಲ್ಲದೇ ದಾಖಲೆಗಳನ್ನು ತಿರುಚಿದ್ದಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಲು ಒತ್ತಾಯಿಸಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು ಈ ಕುರಿತು ಪ್ರತಿಕ್ರಿಯಿಸಿ, ''ಸರ್ಕಾರದ ಆದೇಶ ಸರಿಯಾಗಿ ಪಾಲನೆ ಮಾಡಿದ್ದರೆ, ನೋಟಿಸ್ ಯಾಕೆ ಕೊಡುತ್ತಿದ್ದರು. ಸರ್ಕಾರದ ನೋಟಿಸ್ ಬಂದಿರೋದು ಆಯುಕ್ತರಿಗಲ್ಲ, ಮೇಯರ್ಗೆ ಹಾಗಾಗಿ, ಅವರು ಉತ್ತರಿಸಬೇಕಿತ್ತು'' ಎಂದು ಹೇಳಿದ್ದಾರೆ.
ಸದ್ಯ ಬೆಳಗಾವಿ ಪಾಲಿಕೆ ಬಿಜೆಪಿ ಹಿಡಿತದಲ್ಲಿದ್ದು, ಅದರಲ್ಲೂ ಶಾಸಕ ಅಭಯ್ ಪಾಟೀಲ ನಿಯಂತ್ರಣ ಹೊಂದಿದ್ದಾರೆ. ಅಲ್ಲದೇ ನಗರದಲ್ಲಿ ಸತೀಶ ಜಾರಕಿಹೊಳಿ ವರ್ಸಸ್ ಅಭಯ ಪಾಟೀಲ್ ಸ್ಥಿತಿಯಿದೆ. ಪಾಲಿಕೆಯಲ್ಲಿ ಅಭಯ ಶಕ್ತಿ ಕುಂದಿಸಲು ಸತೀಶ್, ಸರ್ಕಾರದಲ್ಲಿ ತಮ್ಮ ಪ್ರಭಾವ ಬಳಸಿ ಸೂಪರ್ ಸೀಡ್ ಅಸ್ತ್ರ ಹೂಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಸೂಪರ್ ಸೀಡ್ ತೂಗುಗತ್ತಿ ನೇತಾಡುತ್ತಿದ್ದು, ಪಾಲಿಕೆ ಆಯುಕ್ತರು ಸೇರಿ ಮೂವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಾದೇಶಿಕ ಆಯುಕ್ತರಿಗೆ ಮೇಯರ್ ಶೋಭಾ ಸೋಮನಾಚೆ ದೂರು ನೀಡಿದ್ದಾರೆ. ಇಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ಬಿಜೆಪಿ ನಗರ ಸೇವಕರು ಮುಗಿ ಬೀಳುವ ಸಾಧ್ಯತೆಯಿದೆ. ಆದರೆ, ಸೂಪರ್ ಸೀಡ್ ಆತಂಕಕ್ಕೆ ಒಳಗಾಗಿರುವ ಬೆಳಗಾವಿ ಪಾಲಿಕೆ ಪಾರಾಗುತ್ತಾ ಎಂಬುದು ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ.
ಇದನ್ನೂ ಓದಿ: ನೂತನ 70 ಜನ ಶಾಸಕರು ಡಿಕೆ ಶಿವಕುಮಾರ್ ಬೆಂಬಲಕ್ಕೆ ಇದ್ದೇವೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್