ಚಿಕ್ಕೋಡಿ : ಕೊರೊನಾ ವೈರಸ್ ಪರಿಣಾಮದಿಂದ ಭಾರತ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಎಷ್ಟೋ ಬಡ ಕುಟುಂಬಗಳು ಒಂದು ಹೊತ್ತಿನ ತುತ್ತು ಅನ್ನಕ್ಕಾಗಿ ಪರದಾಡುತ್ತಿವೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ 30ಕ್ಕೂ ಹೆಚ್ಚು ಅಲೆಮಾರಿ ಜನಾಂಗದ ಕುಟುಂಬಗಳು ಊಟಕ್ಕೆ ಪರದಾಡುತ್ತಿವೆ. ಶಿಕ್ಕಲಕಾರ ಕುಟುಂಬದ ಹಮಾಲಿಗಳು, ಹೆಳವರು, ಬಹುರೂಪಿ, ಕೊಂಚಿ ಕೊರವರ, ಚಿಕ್ಕಲಗಾರ ಸುಮುದಾಯ ಹೀಗೆ 100ಕ್ಕೂ ಹೆಚ್ಚು ಜನ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ.
ಮನೆ ಮನೆಗೆ ತಿರುಗಾಡಿ ಅಕ್ಕಿ, ಬೇಳೆ ಭಿಕ್ಷೆ ಬೇಡಿ ತಂದು ಶಾಲಾ ಆವರಣದಲ್ಲಿ ಒಲೆ ಹೂಡಿ ಆಹಾರ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ದೇವಾಲಯದ ಆವರಣದಲ್ಲಿ ರಾತ್ರಿ ಕಳೆಯುತ್ತಿದ್ದರು. ಲಾಕ್‌ಡೌನ್ ಪರಿಣಾಮ ಈಗ ಬೀದಿಬದಿ ಮಲಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇವರತ್ತ ಈವರೆಗೂ ಗಮನಹರಿಸದೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಈ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.