ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಹಿಡಿತ ಹೊಂದಿದ್ದ ಜಾರಕಿಹೊಳಿ ಕುಟುಂಬದ ಮತ್ತೋರ್ವ ಸದಸ್ಯ ಹಾಗೂ ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ ರಮೇಶ ಜಾರಕಿಹೊಳಿ ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಅನರ್ಹರಾಗಿದ್ದಾರೆ.
2011ರಲ್ಲಿ ಕೂಡ ಇವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅನರ್ಹರಾಗಿದ್ದರು. ಬಳಿಕ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿ ಅನರ್ಹತೆಯಿಂದ ಪಾರಾಗಿದ್ದರು.
ಗೋಕಾಕ ಶಾಸಕರಾಗಿದ್ದ ರಮೇಶ ಜಾರಕಿಹೊಳಿ ಕಳೆದೊಂದು ವರ್ಷದಿಂದ ಕಾಂಗ್ರೆಸ್ ಪಕ್ಷದ ವಿರೋಧಿ ಚಟುವಟಿಕೆ ನಡೆಸುತ್ತಿದ್ದರು. ಈ ಸಂಬಂಧ ಫೆಬ್ರವರಿ ತಿಂಗಳಲ್ಲೇ ರಮೇಶ ಜಾರಕಿಹೊಳಿ ಹಾಗೂ ಇವರ ಆಪ್ತ ಮಹೇಶ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್‍ಗೆ ದೂರು ನೀಡಿದ್ದರು. ಹೀಗಾಗಿ ಐದು ಸಲ ಶಾಸಕರಾಗಿದ್ದ ರಮೇಶ ಜಾರಕಿಹೊಳಿ ಹಾಗೂ ಅಥಣಿ ಕ್ಷೇತ್ರದಿಂದ ಚೊಚ್ಚಲ ಬಾರಿಗೆ ಶಾಸಕರಾಗಿದ್ದ ಮಹೇಶ ಕುಮಟಳ್ಳಿ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ಆರ್. ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
15ನೇ ವಿಧಾನಸಭೆ ಅವಧಿ ಮುಗಿಯುವವರೆಗೆ ಜಿಲ್ಲೆಯ ಇಬ್ಬರೂ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ತೀರ್ಪಿನ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಹಾಗೂ ಮಹೇಶ ಕುಮಟಳ್ಳಿ ಸುಪ್ರೀಂ ಕೋರ್ಟ್ ಕದತಟ್ಟುವ ಸಾಧ್ಯತೆ ಇದೆ. 2009ರಲ್ಲಿ ಆಪರೇಷನ್ ಕಮಲದಿಂದ ಜೆಡಿಎಸ್‍ನಿಂದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಸೇರಿದ್ದರು. 2011ರಲ್ಲಿ ಅಂದಿನ ಬಿಎಸ್‍ವೈ ಸರ್ಕಾರದ ವಿರುದ್ಧ ತೊಡೆತಟ್ಟಿದ್ದ ಬಾಲಚಂದ್ರ ಜಾರಕಿಹೊಳಿ, ಐವರು ಪಕ್ಷೇತರರು ಸೇರಿ 14 ಶಾಸಕರನ್ನು ಅನರ್ಹಗೊಳಿಸಿ ಅಂದಿನ ಸ್ಪೀಕರ್ ಕೆ.ಜಿ. ಬೋಪಯ್ಯ ತೀರ್ಪು ನೀಡಿದ್ದರು. ಬಳಿಕ ಈ ಎಲ್ಲರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಿ ಸ್ಪೀಕರ್ ಬಳಸಿದ್ದ ಅನರ್ಹ ಅಸ್ತ್ರದಿಂದ ಪಾರಾಗಿದ್ದರು.
ಬಾಲಚಂದ್ರಗೆ ಲಕ್?
ಕಾಂಗ್ರೆಸ್-ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರ ಪತನವಾಗಿದೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ರೆ ಬಾಲಚಂದ್ರ ಜಾರಕಿಹೊಳಿಗೆ ಒಳ್ಳೆಯ ಖಾತೆ ದೊರೆಯುವುದು ನಿಶ್ಚಲವಾಗಿದೆ. ಬಿಜೆಪಿ ಮೂಲಗಳ ಪ್ರಕಾರ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದ್ರೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಪಕ್ಷವಿರೋಧಿ ಚಟುವಟಿಕೆ ಆರೋಪದಡಿ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹರಾಗಲಿರುವ ರಮೇಶ ಜಾರಕಿಹೊಳಿ ಬದಲಿಗೆ ಈ ಸ್ಥಾನವನ್ನು ಬಾಲಚಂದ್ರ ಜಾರಕಿಹೊಳಿಗೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.