ಬೆಳಗಾವಿ : ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸರ್ಕಾರದ ಸೂಚನೆ ಹಾಗೂ ನಿಯಮಗಳ ಅನುಸಾರ ರಾಜ್ಯದ ಡೀಮ್ಡ್ ವಿವಿಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಕೋಡ್‍ಯುನಿಕ್ (ಕರ್ನಾಟಕ ರಾಜ್ಯ ಎಲ್ಲ ಡೀಮ್ಡ್ ವಿಶ್ವವಿದ್ಯಾಲಯಗಳ ಒಕ್ಕೂಟ) ಅಧ್ಯಕ್ಷ ಡಾ. ಪ್ರಭಾಕರ್ ಕೋರೆ ಘೋಷಿಸಿದ್ದಾರೆ. ಈ ಮೂಲಕ ದಿಕ್ಕು ತೋಚದಂತಾಗಿದ್ದ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಉಕ್ರೇನ್‍ದಿಂದ ಭಾರತೀಯ ವೈದ್ಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಉಕ್ರೇನ್ ಮೇಲೆ ರಷ್ಯಾ ಯುದ್ಧದಿಂದ ಸಾವಿರಾರು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಉಕ್ರೇನ್‍ನಲ್ಲಿ ಭಾರತೀಯ ವೈದ್ಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಮಧ್ಯದಲ್ಲಿಯೇ ತೊರೆದುಬರುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದಿದ್ದಾರೆ.
ಉಕ್ರೇನ್ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳ ಮುಂದಿನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂತೆಯೇ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಸೂಚನೆ ಹಾಗೂ ನಿಯಮಗಳಿಗೆ ಅನುಗುಣವಾಗಿ ಉಕ್ರೇನ್‍ನಲ್ಲಿ ಕಲಿಯುತ್ತಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸಲು, ಪ್ರವೇಶವನ್ನು ನೀಡಲಾಗುವುದೆಂದು ತಿಳಿಸಿದ್ದಾರೆ.
ಉಕ್ರೇನ್, ರಷ್ಯಾ ಅನಿರ್ದಿಷ್ಟಾವಧಿಯ ಯುದ್ಧದಿಂದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಪಡುವಂತಾಗಿದೆ. ಅವರ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಸಕಾಲಿಕವಾಗಿ ಸ್ಪಂದಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ಹತಾಶರಾಗದೆ, ತಮ್ಮ ವೈದ್ಯಕೀಯ ಕನಸುಗಳನ್ನು ಭಾರತದಲ್ಲಿಯೇ ನನಸಾಗಿಳಿಸಿಕೊಳ್ಳಬಹುದು. ಆ ಎಲ್ಲ ವಿದ್ಯಾರ್ಥಿಗಳು ಧೈರ್ಯದಿಂದ ಇರಬೇಕು ಎಂದು ಡಾ.ಪ್ರಭಾಕರ್ ಕೋರೆ ಅಭಯ ನೀಡಿದ್ದಾರೆ.