ಬೆಳಗಾವಿ: ರಂಝಾನ್ ಹಿನ್ನೆಲೆ ಮುಸ್ಲಿಂ ಧರ್ಮಗುರುಗಳ ಸಭೆ ನಡೆಸಿದ ಎಡಿಜಿಪಿ ಭಾಸ್ಕರ್ ರಾವ್ ಬಳಿಕ ಕೊಗನೊಳ್ಳಿ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಂಜಾನ್ ಸಭೆ...
ಧರ್ಮಗುರುಗಳು ಹೇಳಿದ್ದನ್ನು ಜನರು ಬಲವಾಗಿ ನಂಬುತ್ತಾರೆ. ಹೀಗಾಗಿ ಧರ್ಮಗುರುಗಳು ತಮ್ಮ ಅನುಯಾಯಿಗಳಿಗೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮನವಿ ಮಾಡಿದರು.
ನಗರದ ಅಂಜುಮನ್ ಹಾಲ್ ನಲ್ಲಿ ಮುಸ್ಲಿಂ ಧರ್ಮಗುರುಗಳ ಜೊತೆಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗೆ ಎಲ್ಲರೂ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸದ್ಯ ರಂಝಾನ್ ಹಬ್ಬ ಆರಂಭವಾಗಿರೋದ್ರಿಂದ ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಬೇಕು. ಇದರ ಜೊತೆಗೆ ಐವರಿಗೆ ಮಾತ್ರ ಮಸೀದಿಗಳಿಗೆ ತೆರಳಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಧರ್ಮಗುರುಗಳು ತಮ್ಮ ಎಲ್ಲ ಅನುಯಾಯಿಗಳಿಗೆ ಕೋವಿಡ್ ನಿಮಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಎಸ್‍ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿರುವುದು ಜನರು. ಜನರಿಗೆ ಅವುಗಳನ್ನು ತಲುಪಿಸಲು ದೇವಸ್ಥಾನ, ಮಸೀದಿ, ಚರ್ಚ್, ಬೇರೆ ಬೇರೆ ಸಮದಾಯದ ಮುಖಂಡರು, ಎನ್‍ಜಿಓಗಳು ಸೇರಿದಂತೆ ಮುಂತಾದವುಗಳ ಮೂಲಕ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜನ್ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸಬೇಕು. ಕೊರೊನಾ ಸೋಂಕು ಬೆಳಗಾವಿಯಲ್ಲಿ ಹರಡದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕೊಗನೊಳ್ಳಿ ಚೆಕ್‍ಪೋಸ್ಟ್‍ಗೆ ಎಡಿಜಿಪಿ ಭಾಸ್ಕರ್ ರಾವ್ ಭೇಟಿ...
ರಾಜ್ಯದಲ್ಲಿ ಕೋವಿಡ್ನ ಎರಡನೇ ಅಲೆ ಭುಗಿಲೆದ್ದ ಪರಿಣಾಮ ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‍ಪೋಸ್ಟ್‍ಗೆ ಶುಕ್ರವಾರ ಭೇಟಿ ನೀಡಿದ್ದರು.
ಚೆಕ್ಪೋಸ್ಟ್ನಲ್ಲಿ ಕಾರ್ಯನಿರತ ಪೊಲೀಸ್, ಆರೋಗ್ಯ ಇಲಾಖೆಗಳ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿ ನೈತಿಕ ಸ್ಥೈರ್ಯ ತುಂಬಿದರು. ಸುರಕ್ಷತೆ ನಿಟ್ಟಿನಲ್ಲಿ ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸುರಕ್ಷತೆಯಲ್ಲಿ ಚೆಕ್ಪೋಸ್ಟ್ನಲ್ಲಿ ಕಾರ್ಯನಿರತ ಸಿಬ್ಬಂದಿ ಕರ್ತವ್ಯ ಬಹುಮುಖ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 14 ಚೆಕ್ಪೋಸ್ಟ್ಗಳಿದ್ದು, ಎಲ್ಲ ಸಿಬ್ಬಂದಿ 3 ಶಿಫ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಉತ್ತರದಲ್ಲಿರುವ ಕೊಗನೊಳ್ಳಿ ಚೆಕ್‍ಪೋಸ್ಟ್ ಬಹಳ ಮಹತ್ವದ ಚೆಕ್‍ಪೋಸ್ಟ್ ಆಗಿದೆ. ಇಲ್ಲಿ ಸಿಬ್ಬಂದಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಡಿವೈಎಸ್ಪಿ ಮನೋಜ್‍ಕುಮಾರ ನಾಯಕ್, ಸ್ಥಳೀಯ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ ಸತ್ಯನಾಯಕ್, ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಎಸ್. ತಳವಾರ, ಶಹರ್ ಪೊಲೀಸ್ ಠಾಣೆಯ ಪಿಎಸ್‍ಐ ಅನೀಲ ಕುಂಭಾರ ಮೊದಲಾದವರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.