ಬೆಳಗಾವಿ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿಯ ಸಹಾಯಕ ನಿಯಂತ್ರಕ ಸುಭಾಷ್ ಉಪ್ಪಾರ ನಿವಾಸ ಮೇಲೆ ಎಸಿಬಿ ದಾಳಿಯಾಗಿದೆ. ಅವರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಬೆಳಗಾವಿಯ ರುಕ್ಮಿಣಿ ನಗರದ ಮನೆ ಒಳಗೊಂಡಂತೆ ಸುಭಾಷ್ ಉಪ್ಪಾರ ಅವರಿಗೆ ಸೇರಿದ ನಾಲ್ಕು ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ಮೊತ್ತದ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ.
ಬೆಳಗಾವಿಯ ರುಕ್ಮಿಣಿ ನಗರದಲ್ಲಿ ಭವ್ಯವಾದ ಡುಪ್ಲೆಕ್ಸ್ ಬಂಗ್ಲೆ, ಹೆಚ್ ಡಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಒಂದು ನಿವೇಶನ, 337 ಗ್ರಾಂ ಚಿನ್ನಾಭರಣ, ವಿವಿಧ ಬ್ಯಾಂಕ್‌ಗಳಲ್ಲಿ 51,51,672 ರೂಪಾಯಿ ಬ್ಯಾಲೆನ್ಸ್, ₹5 ಲಕ್ಷ ನಗದು ಪತ್ತೆಯಾಗಿದೆ.
ದಾಖಲಾತಿಗಳ ಪರಿಶೀಲನೆ ಹಾಗೂ ತನಿಖೆ ಮುಂದುವರಿದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಬೆಳಗಾವಿಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.