ಬೆಳಗಾವಿ: ನಗರ ಪ್ರದೇಶಕ್ಕೆ ಸಮೀಪವಿರುವಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.
2008ರಲ್ಲಿ ಆರಂಭವಾಗಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ 2.5ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಣಿ ಚೆನ್ನಮ್ಮ ವಿವಿ ರಾಜ್ಯದಲ್ಲಿಯೇ ದೊಡ್ಡ ವಿವಿ ಎಂದು ಗುರುತಿಸಲ್ಪಡುತ್ತಿದೆ. ಕಳೆದ 10 ವರ್ಷಗಳಿಂದ ಭೂತರಾಮನಹಟ್ಟಿ ಪಕ್ಕದಲ್ಲಿರುವ ಧಾರವಾಡ ವಿವಿಗೆ ನೀಡಿದ ಜಾಗದಲ್ಲಿ ರಾಣಿ ಚೆನ್ನಮ್ಮ ವಿವಿಯ ತರಗತಿಗಳು ನಡೆಯುತ್ತಿವೆ. ಆದ್ದರಿಂದ ಈ ವಿವಿಯನ್ನು ನಗರ ಪ್ರದೇಶದಲ್ಲಿ ಒಂದು ಜಾಗ ಗುರುತಿಸಿ ಅಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ವಿಶ್ವವಿದ್ಯಾಲಯಕ್ಕೆ ಶೀಘ್ರದಲ್ಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ರಾಣಿ ಚೆನ್ನಮ್ಮ ವಿವಿಯನ್ನು ನಗರ ಪ್ರದೇಶದಲ್ಲಿ ಬಿಟ್ಟು ಬೇರೆ ಕಡೆಗೆ ಜಾಗ ನೀಡಬಾರದು. ಇಲ್ಲದಿದ್ದರೆ ಸದ್ಯ ಅರಣ್ಯ ಇಲಾಖೆಯ ಜಾಗವನ್ನು ವಿವಿಗೆ ಹಸ್ತಾಂತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.