ಬೆಳಗಾವಿ: 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ ವಿಚಾರ. ಇದೇ 24ಕ್ಕೆ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ಆಗುತ್ತಿದ್ದು, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ನಟ ಅಭಿಷೇಕ್ ಅಂಬರೀಶ್ ಕೋರಿದರು.
ಬೆಳಗಾವಿ ಖಾಸಗಿ ಹೊಟೇಲ್ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್ನಲ್ಲಿ ಬೆಳಗಾವಿ ಜಿಲ್ಲೆಯವರು ಅಭಿನಯಿಸಿದ್ದಾರೆ. ಕಲಾವಿದರು ಇಲ್ಲಿಗೆ ಬರೋದಿಲ್ಲ ಎಂಬ ದೂರು ಇದೆ. ಹೀಗಾಗಿ ಬೆಳಗಾವಿಗೆ ಬಂದು ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿನಿಮಾಗೆ ಒಂದೊಳ್ಳೆ ಕಂಟೆಂಟ್ ಮುಖ್ಯ: ಇದು ರೂಟಿನ್ ಸಿನಿಮಾ ಅಂತೂ ಅಲ್ಲ, ಒಂದು ವಿಶೇಷ ಚಿತ್ರವಿದು. ಬೆಂಗಳೂರು, ಮೈಸೂರು, ಕನಕಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಶೂಟಿಂಗ್ ನಡೆಸಿದ್ದೇವೆ. ಸಿನಿಮಾ ಶೀರ್ಷಿಕೆ "ಬ್ಯಾಡ್ ಮ್ಯಾನರ್ಸ್" ಎಂದಿದೆ. ನಾವೆಲ್ಲಾ ಬ್ಯಾಡ್ ಆಗೋಕೇನೆ ಬಂದಿದ್ದೇವೆ. ಎಲ್ಲರಿಗೂ ಈ ಸಿನಿಮಾ ಅರ್ಥ ಆಗಲಿದೆ, ಹಿಡಿಸಲಿದೆ. ನಾವು ರೀಮೇಕ್ ಮಾಡೋದಿಲ್ಲ, ನಮ್ಮ ಸಿನಿಮಾವನ್ನು ಬೇರೆಯವರು ಡಬ್ಬಿಂಗ್ಗೆ ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಬೇಕು ಅನ್ನೋದು ಎಲ್ಲರ ಆಸೆ. ಸಿನಿಮಾಗೆ ಬಜೆಟ್ ಮುಖ್ಯ ಅಲ್ಲ. ಕಥೆ ಮತ್ತು ಕಂಟೆಂಟ್ ಅಷ್ಟೇ ಮುಖ್ಯ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ನೋಡಿ, ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ದರ್ಶನ್ ಅಭಿಷೇಕ್ ಸಿನಿಮಾ: ನಟ ದರ್ಶನ್ ಮತ್ತು ನಿಮ್ಮ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಕಥೆ ಬಂದರೆ ನಾನೇ ಕೈ ಕಾಲು ಹಿಡಿದು ಅವರನ್ನು ಒಪ್ಪಿಸುತ್ತೇನೆ. ಅಂತಹ ಕಥೆ ಬಂದರೆ ಖಂಡಿತ ನಾನು ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದರು. ಇನ್ನೂ, ಎಲ್ಲಿ ಪ್ರೀತಿ ಇರುತ್ತೋ ನಾವು ಅಲ್ಲಿಗೆ ಬರುತ್ತೇವೆ. ಅಂಬರೀಷ್ ಹೆಸರು ಎಲ್ಲೆಲ್ಲಿ ಇದೆಯೋ ಅಲ್ಲಿಗೆ ಹೋಗುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಇದನ್ನೂ ಓದಿ: ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಬಗ್ಗೆ ಹೇಳಿದ್ದೇನು ?
ಮಹದಾಯಿ ಹೋರಾಟಕ್ಕೆ ಚಿತ್ರನಟರು ಯಾರೂ ಬರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇರಬಹುದು, ದೂರ ಇದ್ದ ಕಾರಣಕ್ಕೆ ಬರಲು ಆಗುತ್ತಿಲ್ಲ. ಒಂದು ವೇದಿಕೆ ಮತ್ತು ಸಂಪರ್ಕ ಕೊರತೆಯಿಂದಾಗಿ ಬರಲು ಆಗಿಲ್ಲ. ಒಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಎಲ್ಲರೂ ಬರ್ತಾರೆ. ನಾವು ಹೋರಾಟಕ್ಕೆ ಬರಲ್ಲ ಎಂದು ಯಾವತ್ತೂ ಹೇಳಿಲ್ಲ. ಸಂಪರ್ಕ ಮಾಡಿ ಕರೆದರೆ ನಾವು ಬಂದೇ ಬರುತ್ತೇವೆ. ನಮಗೆ ಯಾವುದೇ ಲಾಭ ಇಲ್ಲ. ನಮಗೆ ಒಂದು ವೋಟು ಬೀಳಲ್ಲ. ರಾಜಕೀಯಕ್ಕೂ ನಮಗೂ ಬಹಳ ದೂರ. ಆದರೆ ನಮ್ಮ ನಾಡು, ನಮ್ಮ ಭಾಷೆಗಾಗಿ ನಾವು ಬರುತ್ತೇವೆ ಎಂದು ತಿಳಿಸಿದರು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ಇದೇ ನವೆಂಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಖಂಡನೆ: ನಟಿ ತ್ರಿಶಾ ಪರ ನಿಂತ ಮೆಗಾಸ್ಟಾರ್ ಚಿರಂಜೀವಿ