ಅಥಣಿ: ಕೃಷ್ಣಾ ನದಿಯಿಂದ ಸಂಭವಿಸಿದ ಪ್ರವಾಹ ಕಡಿಮೆಯಾಗಿದ್ದು, ನದಿ ತೀರದಲ್ಲಿ ವಸ್ತುಗಳು ತೇಲಿ ಬಂದಿವೆ. ಇವುಗಳನ್ನು ಕಂಡ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಯುವಕ ಕುಮಾರ್ ಪುಂಡಲಿಕಗೋಳ ಎಂಬುವವರು ಮಾನವೀಯತೆ ಮೆರೆದಿದ್ದು, ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಕೃಷ್ಣಾ ಪ್ರವಾಹ ನದಿ ಪಾತ್ರದ ಜನರಿಗೆ ಸಾಕಷ್ಟು ನೋವುಂಟು ಮಾಡಿದ್ದು, ಜನರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೀಗಿರುವಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವಸ್ತುಗಳು ನದಿ ತೀರಾಕ್ಕೆ ಬಂದಿದ್ದು, ಇದನ್ನು ಕಂಡ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಯುವಕ ಕುಮಾರ್ ಪುಂಡಲಿಕಗೋಳ ಎಂಬುವವರು ಸಮಯ ಪ್ರಜ್ಞೆ ಮೆರೆದು ವಸ್ತು ಕಳೆದುಕೊಂಡರಿಗೆ ಮಾಹಿತಿ ನೀಡಲು ವಸ್ತು ಸಿಕ್ಕಿರುವ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಜನುವಾಡದಿಂದ ಝುಂಜರವಾಡ ಗ್ರಾಮ ಸರಿ ಸುಮಾರು 42 ಕಿಲೋ ಮೀಟರ್ ದೂರದ ಕೃಷ್ಣಾ ನದಿಯಲ್ಲಿ ಪಾತ್ರೆಗಳು ತೇಲುತ್ತಾ ಬಂದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಜನವಾಡ ಗ್ರಾಮದ ಬಸಪ್ಪ ರಾಮಪ್ಪ ಬ್ಯಾಡಗಿ ಎನ್ನುವವರು ನಿನ್ನೆ ಬಂದು ಪಾತ್ರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.