ಬೆಳಗಾವಿ: ಚಿಕ್ಕ ಅಂಗಡಿ, ನಾಲ್ಕೈದು ಮಿಕ್ಸಿಗಳು. ನಾನಾ ಬಗೆಯ ಹಣ್ಣುಗಳು. ಜೋಡಿಸಿಟ್ಟ ಅನೇಕ ಹಣ್ಣಿನ ರಸದ ಬಾಟಲಿಗಳು. ಅಂಗಡಿ ಮುಂದೆ ಸಾಲುಗಟ್ಟಿ ಜ್ಯೂಸ್ ಕುಡಿಯಲು ಕಾತರರಾಗಿ ಕಾಯುವ ಗಿರಾಕಿಗಳು. ಕಳೆದ 11 ವರ್ಷಗಳಿಂದ ಕುಂದಾನಗರಿ ಜನತೆಗೆ ಜ್ಯೂಸ್ ಸಿಹಿ ಉಣಬಡಿಸುತ್ತಿದ್ದಾರೆ ಯುವಕ ರಾಹುಲ್.
ಹೌದು, ಚಿಕ್ಕ ಅಂಗಡಿಯಲ್ಲಿ ನಾನಾ ಭಗೆಯ ಜ್ಯೂಸ್ ಮಾಡುವ ರಾಹುಲ್ ಪಾವಲೆ ಮೂಲತಃ ಬೆಳಗಾವಿಯವರು. ಅವರ ತಂದೆ ನಡೆಸುತ್ತಿದ್ದ ಜ್ಯೂಸ್ ಅಂಗಡಿಯನ್ನು ಇಂದು ತಾವು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹಳೆಯ ರುಚಿಗೆ ಯಾವುದೇ ಕುಂದು ಬರದಂತೆ ತಾವೇ ಕೈಯಾರೆ ಜ್ಯೂಸ್ ಮಾಡುವ ಇವರು, ಕುಂದಾನಗರಿ ಜ್ಯೂಸ್ ಪ್ರಿಯರ ಫೇವರೇಟ್. 30ಕ್ಕೂ ಹೆಚ್ಚು ಬಗೆಯ ಜ್ಯೂಸ್ ತಯಾರಿಸುವ ರಾಹುಲ್, ಜ್ಯೂಸ್ ತಯಾರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ಬಗೆಬಗೆ ಹಣ್ಣುಗಳ ಹೊರತಾಗಿಯೂ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿರುವ ದೂಧ್ ಸೋಡಾ, ದೂಧ್ ವಾಳಾ, ಕೋಕಂ, ಪಾಚಕ್ ಶರಬತ್, ಜಂಜೀರ್ ಸೇರಿದಂತೆ ಹಲವು ಬಗೆಯ ಜ್ಯೂಸ್ಗಳು ಇಲ್ಲಿ ಪ್ರಸಿದ್ಧಿ ಪಡೆದಿವೆ.
ಆರೋಗ್ಯಕ್ಕೂ ಉತ್ತಮ ಇವರ ಜ್ಯೂಸ್:
ಶುದ್ಧ ಹಾಲು, ಪಿಸ್ತಾ, ಐಸ್, ವಾಳಾ, ಸಕ್ಕರೆ, ಆರೆಂಜ್ ಹಾಗೂ ವಿವಿಧ ಬಗೆಯ ಉತ್ತಮ ಹಣ್ಣುಗಳನ್ನು ಬಳಸಿ ತಯಾರಿಸುವ ಇವರ ಜ್ಯೂಸ್ ವಿಭಿನ್ನ. ಜ್ಯೂಸ್ಗಳಲ್ಲಿ ಯಾವುದೇ ಕೃತಕ ಬಣ್ಣ ಬಳಸದೆ ನಿಂಬೆಹಣ್ಣು, ಪಾಚಕ್, ಅಲ್ಲಾ, ಉಪ್ಪು, ಕೋಕಂ ಸೋಡಾ ಬಳಸಿ ಜ್ಯೂಸ್ ತಯಾರಿಸುತ್ತಾರೆ.
ರಾಹುಲ್ ಹೇಳುವ ಪ್ರಕಾರ ಅವರ ತಂದೆ ರಾಘವೇಂದ್ರ ಅವರು ಸುಮಾರು 42 ವರ್ಷಗಳ ಕಾಲ ಇದೇ ಕೆಲಸ ಮಾಡುತ್ತಿದ್ದರಂತೆ. ಅವರು ಮಾಡಿದ ಜ್ಯೂಸ್ ಹಾಗೂ ಕೈರುಚಿಗೆ ಮನಸೋತಿದ್ದ ಜನರು ಪ್ರತಿನಿತ್ಯ ಬರುತ್ತಿದ್ದರಂತೆ. ನಂತರ ಅವರ ಮಗನಾದ ರಾಹುಲ್ ಪಾವಲೆ ಈ ವೃತ್ತಿ ಮುಂದುವರಿಸಿಕೊಂಡು ಹೊರಟಿದ್ದು, ಅದೇ ರುಚಿಯನ್ನ ಇಗಲೂ ಕಾಪಾಡಿಕೊಂಡು ಹೋಗುತ್ತಿದ್ದಾರೆ.