ಬೆಳಗಾವಿ: ಬೆಳ್ಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಮೃತ ವ್ಯಕ್ತಿ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಲಾರಿ ಚಾಲಕ ಲಾರಿಯನ್ನು ಸೈಡ್ಗೆ ಹಾಕಿದ್ದರು. ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿ ಚಾಲಕನಿಗೆ ಗುದ್ದಿದೆ. ಅಪಘಾತದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಮರೇಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ದಸರಾಕ್ಕೆಂದು ಊರಿಗೆ ವಾಪಸಾಗುವಾಗ ಬೈಕ್ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ
ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದವರು ಎಂಬ ಮಾಹಿತಿ ದೊರೆತಿದೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.