ಅಥಣಿ (ಬೆಳಗಾವಿ): ತಾಲೂಕಿನ ದಬದಬಹಟ್ಟಿ ಗ್ರಾಮದಲ್ಲಿ ಲೋಕ ಕಲ್ಯಾಣಕ್ಕೋಸ್ಕರ ಸ್ವಾಮೀಜಿಯೊಬ್ಬರು 24 ಗಂಟೆಗಳ ಕಾಲ ಜೀವಸಮಾಧಿ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನ ದಬದಬಹಟ್ಟಿ ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು 10 ಅಡಿ ಆಳದ ಭೂಮಿಯೊಳಗೆ ಅನುಷ್ಠಾನಕ್ಕೆ ಕುಳಿತಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಜಂಬಿಗಿ ಗ್ರಾಮದ ಸುರೇಶ್ ಮಹರಾಜ (28) ಮಹಾಸಿದ್ಧೇಶ್ವರ ಕರ್ಮಯೋಗಿ ಎಂಬ ಇವರು, ಗ್ರಾಮದ ಹೊರವಲಯದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಸುಮಾರಿಗೆ ಹತ್ತಡಿ ಆಳದಲ್ಲಿ ದೇವರ ನಾಮಸ್ಮರಣೆ ಮಾಡುವುದಾಗಿ ಹೇಳಿ ಅನುಷ್ಠಾನಕ್ಕೆ ಕುಳಿತಿದ್ದಾರೆ.
ಸಂಪೂರ್ಣವಾಗಿ ಮೇಲ್ಭಾಗದಲ್ಲಿ ತಗಡಿನಿಂದ ಮುಚ್ಚಿದ್ದು, ಮಣ್ಣು ಸುರಿದು ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ. ಇವತ್ತು ರಾತ್ರಿ 12 ಗಂಟೆಗೆ ಸ್ವಾಮೀಜಿಯ ಅನುಷ್ಠಾನ ಪೂರ್ಣಗೊಳ್ಳುತ್ತದೆ. ಮೇಲಿನ ಮಣ್ಣನ್ನು ತೆರವುಗೊಳಿಸಿ ನಾನು ಮೇಲೆ ಬರುತ್ತೇನೆಂದು ಸ್ವಾಮೀಜಿ ಹೇಳಿ ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಪ್ರಪಂಚವನ್ನು ಕಾಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಹಾಗೂ ರಾಹುಗ್ರಸ್ತ ಸೂರ್ಯಗ್ರಹಣ ದೇಶಕ್ಕೆ ಯಾವುದೇ ದುಷ್ಪರಿಣಾಮ ಬೀರದಿರಲಿ ಎಂದು ಸ್ವಾಮೀಜಿ ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಅವರ ಭಕ್ತರು ತಿಳಿಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಈ ರೀತಿ ಘಟನೆಗಳು ಜನ ಮರಳೋ ಜಾತ್ರೆ ಮರಳೋ ಎನ್ನುವಂತಿದೆ ಎಂದು ಕೆಲವು ಪ್ರಜ್ಞಾವಂತರು ಸ್ವಾಮೀಜಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಾಲೂಕು ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.