ಅಥಣಿ (ಬೆಳಗಾವಿ): ತಳವಾರ ಸಮುದಾಯ ಗಂಗಾಮಾತಾ ಸಮುದಾಯಕ್ಕೆ ಸೇರಿದೆ ಎಂಬ ಡಿಸಿಎಂ ಲಕ್ಷ್ಮಣ್ ಸವದಿಯವರ ಗೊಂದಲದ ಹೇಳಿಕೆ ಖಂಡಿಸಿ ಅಥಣಿ ತಳವಾರ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ಡಿಸಿಎಂ ಸವದಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಳವಾರ ಸಮಾಜದ ಮುಖಂಡ ರಾಜು ಜಮಖಂಡಿಕರ್, ಡಿಸಿಎಂ ಸವದಿಯವರು ಕಳೆದ ಕೆಲ ದಿನಗಳ ಹಿಂದೆ ಪರಿವಾರ-ತಳವಾರ ಹಾಗೂ ಇತರೆ ಸಮುದಾಯದವರು ಗಂಗಾಮಾತಾ ಪರ್ಯಾಯ ಪಂಗಡಗಳಾಗಿವೆ. ಹಿಂದಿನ ಸರ್ಕಾರದ ಲೋಪದೋಷಗಳಿಂದ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ವಿತರಿಸುವುದು ವಿಳಂಬವಾಗಿದೆ ಎಂದಿದ್ದರು.
ತಳವಾರ ಸಮುದಾಯದಲ್ಲಿ ಯಾವುದೇ ಒಳ ಪಂಗಡಗಳಿಲ್ಲ. ತಳವಾರ ಸಮುದಾಯ ಒಂದೇ ಇದೆ. ಇದು ಯಾವುದೇ ಪಂಗಡಕ್ಕೆ ಸೇರುವುದಿಲ್ಲ. ತಳವಾರ ಸಮುದಾಯ ಗಂಗಾಮಾತಾ ಸಮುದಾಯದಲ್ಲಿಲ್ಲ. ಈ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿಯವರಿಗೆ ಸರಿಯಾದ ಮಾಹಿತಿಯ ಅಗತ್ಯವಿದೆ. ನಿಮ್ಮ ಹೇಳಿಕೆ ಇಂದು ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದೆ.
ಇದರಿಂದ ಮುಂಬರುವ ವಿಧಾನಸಭಾ ಕಲಾಪದಲ್ಲಿ ಸರಿಯಾದ ಮಾಹಿತಿ ನೀಡಿ, ತಳವಾರ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನ ಆದಷ್ಟು ಬೇಗನೆ ಸರಿಪಡಿಸಿ. ರಾಜ್ಯ ಸರ್ಕಾರ ತಳವಾರ ಸಮುದಾಯಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದು, ಇದರಿಂದ ಆರ್ಥಿಕವಾಗಿ ಹಿಂದುಳಿದ ನಮಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗನೆ ನಮ್ಮ ಸಮಸ್ಯೆ ಬಗೆಹರಿಸಿ. ಜೊತೆಗೆ ಡಿಸಿಎಂ ಸವದಿಯವರು ತಮ್ಮ ಹೇಳಿಕೆಗೆ ಬದ್ದರಾಗಿದ್ದರೆ ಸಾಬಿತುಪಡಿಸಿ, ಇಲ್ಲವಾದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.