ಬೆಳಗಾವಿ : ಕಳೆದ 20 ದಿನಗಳಿಂದ ಒಂದು ವರ್ಷದ ಮಗಳ ಮುಖ ನೋಡದೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಇಲ್ಲಿನ ನರ್ಸ್ ದಂಪತಿ.
ಹಸುಳೆಯಿಂದ ವೃದ್ಧರವರೆಗೆ, ಪ್ರಾಣಿಗಳನ್ನು ಬಿಡದೇ ಕಾಡುತ್ತಿರುವ ಕೊರೊನಾ ಸೋಂಕು ಒಂದು ವರ್ಷ ಕೂಸಿನಿಂದ ಪಾಲಕರನ್ನು ಬೇರೆಯಾಗಿಸಿದೆ. ಬೆಳಗಾವಿಯ ವೀರಭದ್ರ ನಗರದ ಜೈನ್ ಕಾಲೋನಿ ನಿವಾಸಿಗಳಾದ ಸಂತೋಷ ಜನಮಟ್ಟಿ ಹಾಗೂ ದೀಪಾ ಜನಮಟ್ಟಿ ದಂಪತಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದಾರೆ. ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ದಂಪತಿ 5 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೇರಿದೆ. ಇದರಿಂದ ಇಲ್ಲಿನ ಬಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಮ್ಸ್ನ ಸೋಂಕಿತರ ವಾರ್ಡ್ನಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾಡಳಿತ ಮನೆಗೆ ಕಳುಹಿಸದೇ ಹೋಟೆಲ್ಗಳಲ್ಲಿರಿಸಿದೆ. ಹೀಗಾಗಿ ಈ ದಂಪತಿ ಕಳೆದ 20 ದಿನಗಳಿಂದ ಮನೆಗೆ ಹೋಗದೇ ಮಗುವಿನ ಮುಖ ನೋಡಲಾಗದೇ ಇಲ್ಲಿಯೇ ಇದ್ದಾರೆ.
ಮಗುವನ್ನು ಸಂತೋಷ ಜನಮಟ್ಟಿ ಅವರ ತಾಯಿಯೇ ಆರೈಕೆ ಮಾಡುತ್ತಿದ್ದಾರೆ. ತಾಯಿ ಹೃದಯ ತನ್ನ ಕಂದನನ್ನು ಕಾಣಲಾಗದೇ ಪರಿತಪಿಸುತ್ತಿದೆ. ಅತ್ತ ಮಗು ಸಹ ಹೆತ್ತ ತಂದೆ-ತಾಯಿ ಕಾಣದೇ ಅಜ್ಜಿಯೊಂದಿಗಿದೆ..