ಬೆಳಗಾವಿ: ಶುದ್ಧ ನೀರು ಸೇವಿಸಿದರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಹೀಗಾಗಿ ಜನರು ವಾಟರ್ ಫಿಲ್ಟರ್, ಅಕ್ವಾಗಾರ್ಡ್ ಸೇರಿದಂತೆ ಹಲವು ಶುದ್ಧಕ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬಡ ಜನರಿಗೆ ಈ ದುಬಾರಿ ಯಂತ್ರಗಳ ಖರೀದಿ ತುಸು ಕಷ್ಟವೇ. ಈ ಸಮಸ್ಯೆಗೆ ಮುಕ್ತಿ ನೀಡಲೆಂದೇ ಬೆಳಗಾವಿಯ ಯುವಕ ಫಿಲ್ಟರ್ ಒಂದನ್ನು ತಯಾರಿಸಿದ್ದಾರೆ.
ಬೆಳಗಾವಿಯ ಖಾಸಭಾಗ ನಿವಾಸಿ ನಿರಂಜನ್ ಕಾರಗಿ ಅವರ ವಾಟರ್ ಫಿಲ್ಟರ್ ದೇಶ - ವಿದೇಶಗಳಲ್ಲಿ ಹೆಸರು ವಾಸಿಯಾಗಿದೆ. 24 ವರ್ಷ ವಯಸ್ಸಿನ ನಿರಂಜನ್ ಸಿಂಪಲ್ ವಾಟರ್ ಫಿಲ್ಟರ್ ಮೂಲಕ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಇಂಜಿನಿಯರಿಂಗ್ ಪದವಿ ಪೂರೈಸಿರುವ ಇವರು, ತಾವು ತಯಾರಿಸಿದ ಫಿಲ್ಟರ್ಗೆ ನಿರ್ನಲ್ ಎಂದು ಹೆಸರಿಟ್ಟಿದ್ದಾರೆ. ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಶುದ್ಧ ನೀರು ಸಿಗುವ ಯಂತ್ರ ನಿರ್ನಲ್ ಬ್ರ್ಯಾಂಡ್ ಅಡಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಬೆಳಗಾವಿಯ ಉದ್ಯಮಬಾಗ್ದಲ್ಲಿ ನಿರ್ನಲ್ ಕಂಪನಿ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದಾರೆ. ಈವರೆಗೆ 2 ಲಕ್ಷಕ್ಕೂ ಅಧಿಕ ಫಿಲ್ಟರ್ ಉತ್ಪಾದಿಸಿ ಮಾರಾಟ ಮಾಡಿದ್ದಾರೆ. ಬೆಳಗಾವಿಯ ಅಂಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಪದವಿ ಪಡೆದಿರುವ ನಿರಂಜನ್ ಕಾಲೇಜು ದಿನಗಳಲ್ಲೇ ಫಿಲ್ಟರ್ ಅನ್ವೇಷಣೆ ಮಾಡಿರುವುದು ವಿಶೇಷ.
ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆಯೇ ಪ್ರೇರಣೆ: ಖಾಸಭಾಗದಲ್ಲಿ ನಿರಂಜನ್ ಅವರ ಮನೆ ಮುಂದೆಯೇ ಸರ್ಕಾರಿ ಶಾಲೆಯಿದೆ. ಇಲ್ಲಿನ ಮಕ್ಕಳು ನಿತ್ಯ ಅಶುದ್ಧ ನೀರು ಸೇವಿಸುತ್ತಿರುವುದನ್ನು ಗಮನಿಸಿದ್ದ ಇವರು ಕಡಿಮೆ ದರದಲ್ಲಿ ಫಿಲ್ಟರ್ ಶೋಧಿಸಬೇಕು ಎಂದು ಕೊಂಡಿದ್ದರು. ತಾವು ಕಂಡ ಕನಸನ್ನು ಇದೀಗ ಸಾಕಾರಗೊಳಿಸಿದ್ದಾರೆ. ಕೇವಲ 30 ಪೈಸೆಗೆ ಒಂದು ಲೀಟರ್ ಶುದ್ಧ ನೀರು ಸಿಂಗುವಂತಹ ಫಿಲ್ಟರ್ ಉತ್ಪಾದನೆ ಮಾಡಿದ್ದಾರೆ.
ಅಶುದ್ಧ ನೀರು ಕ್ಷಣಾರ್ಧದಲ್ಲಿ ಶುದ್ಧವಾಗುತ್ತೆ: ಹಲವು ವಾಟರ್ ಫಿಲ್ಟರ್ ಕಂಪನಿಗಳಿಂದು ಮಾರುಕಟ್ಟೆಯಲ್ಲಿವೆ. ಆದರೆ, ಈ ಎಲ್ಲವೂ ದುಬಾರಿ ಹಾಗೂ ಮನೆಯಲ್ಲಿ ಮಾತ್ರ ಬಳಸಬಹುದಾಗಿದೆ. ಆದರೆ ನಿರಂಜನ್ ತಯಾರಿಸಿದ ಫಿಲ್ಟರ್ ಅನ್ನು ಪ್ರವಾಸದ ವೇಳೆ ಬಾಟಲಿಗೆ ಅಳವಡಿಸಿ ಶುದ್ಧ ನೀರು ಸೇವಿಸಬಹುದು. ವಿಶೇಷ ಅಂದ್ರೆ ಈ ಫಿಲ್ಟರ್ ಕಾರ್ಯನಿರ್ವಹಿಸಲು ವಿದ್ಯುತ್ ಬೇಕಿಲ್ಲ. ನೀರು ಪೋಲಾಗಲ್ಲ. ಎಷ್ಟೇ ಕಲುಷಿತ ನೀರಿದ್ದರೂ ಅದನ್ನು ಶುದ್ಧೀಕರಿಸುವ ಸಾಮರ್ಥ್ಯ ಈ ಫಿಲ್ಟರ್ ಹೊಂದಿದೆ. ವೈರಸ್, ಬ್ಯಾಕ್ಟೀರಿಯಾ, ಕ್ಲೋರಿನ್, ನಿರ್ಮೂಲನೆ ಮಾಡಿ ಶುದ್ಧ ನೀರು ಕೊಡುವ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.
2017ರಿಂದ ಸ್ಥಳೀಯ ಕಚ್ಚಾವಸ್ತುಗಳನ್ನು ಬಳಸಿಕೊಂಡು ಫಿಲ್ಟರ್ ತಯಾರಿಸುತ್ತಿದ್ದು, ಕೇವಲ 2 ಸಾವಿರ ರೂ. ಬಂಡವಾಳ ಹಾಕಿ ಉದ್ಯಮ ಆರಂಭಿಸಿದ್ದರು. 30 ರೂಪಾಯಿಗೆ ಸಿಗುವ ಫಿಲ್ಟರ್ 100 ಲೀಟರ್ ನೀರು ಶುದ್ಧೀಕರಣ ಮಾಡಬಹುದು. ಅಮೆರಿಕ, ಶ್ರೀಲಂಕಾ, ಮಲೇಷ್ಯಾ ಸೇರಿದಂತೆ ನಿರ್ನಲ್ ಉತ್ಪನ್ನಗಳು 15 ದೇಶಗಳಿಗೆ ರಫ್ತಾಗುತ್ತಿವೆ. ದೇಶದ ವಿವಿಧ ಭಾಗಗಳಿಗೂ ನಿರ್ನಲ್ ಫಿಲ್ಟರ್ ಪೂರೈಕೆ ಆಗುತ್ತಿದೆ. ಅಲ್ಲದೇ ಸಿಆರ್ಪಿಎಫ್ ಕಮಾಂಡರ್ಗಳು ನಿತ್ಯ ಇದೆ ಫಿಲ್ಟರ್ ಬಳಸುತ್ತಿದ್ದಾರೆ. 160 ದೇಶಗಳು ಪಾಲ್ಗೊಂಡಿದ್ದ ವಿಶ್ವ ಇನೋವೇಶನ್ ಕಾಂಗ್ರೆಸ್ 2020 ಸ್ಪರ್ಧೆಯಲ್ಲಿ ಟಾಪ್ 50 ಆವಿಷ್ಕಾರಗಳಲ್ಲಿ ನಿರ್ನಲ್ ಫಿಲ್ಟರ್ ಕೂಡ ಒಂದಾಗಿದೆ.