ಬೆಳಗಾವಿ: ಅತಿವೃಷ್ಟಿಯಿಂದ ಮನೆ ಬಿದ್ದು 9 ತಿಂಗಳು ಕಳೆದರೂ, ಪರಿಹಾರ ನೀಡದ ಹಿನ್ನೆಲೆ ಮನೆ ನಿರ್ಮಿಸಿ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯ ನೆರೆ ಸಂತ್ರಸ್ತ ವ್ಯಕ್ತಿಯ ಈ ವಿಡಿಯೋ ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಈರಪ್ಪ ನಾಡಗೌಡ್ರ ಎಂಬುವರು ಮೊಬೈಲ್ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅಲ್ಲದೇ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿರಂತರ ಮಳೆಗೆ ಕಳೆದ ನವೆಂಬರ್‌ನಲ್ಲಿ ಅವರ ಮನೆ ನೆಲಸಮವಾಗಿತ್ತು. ಮನೆ ಬಿದ್ದರೂ ಪರಿಹಾರ ನೀಡಿಲ್ಲ. ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ತಹಶೀಲ್ದಾರ್, ಬೆಳಗಾವಿ ಡಿಸಿ, ಲೋಕಾಯುಕ್ತ, ಸಿಎಂಗೆ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿರುವ ನೆರೆ ಸಂತ್ರಸ್ತ ಈರಪ್ಪ ಮೊಬೈಲ್ ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನೆರೆ ಸಂತ್ರಸ್ತ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಸಕರಿಗೆ ಕರೆ ಮಾಡಿದರೆ, ಸರ್ಕಾರದಿಂದ ಪರಿಹಾರ ಬಂದಿಲ್ಲ ಎಂದು ಫೋನ್ ಕಟ್ ಮಾಡ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಶಿರಸಿಯಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡು ವರ್ಷ ಕಳೆದರೂ ಪರಿಹಾರ ಕಾಣದ 12 ಕುಟುಂಬ
ಗ್ರಾಮಲೆಕ್ಕಾಧಿಕಾರಿ ಎರಡು ಸಾವಿರ ರೂಪಾಯಿ ಹಣ ಪಡೆದಿದ್ದರು. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ನೀಡದಿದ್ದಾಗ ನನ್ನ ಮನೆಯ ವರದಿ ಮಾಡಿಲ್ಲ. ಗ್ರಾಮಲೆಕ್ಕಾಧಿಕಾರಿ ಕರ್ತವ್ಯಲೋಪ ಎಸೆಗಿದ್ದಾರೆ. ಅವರನ್ನ ವರ್ಗಾವಣೆ ಮಾಡಿ ಎಂದು ಸಹ ತಹಶೀಲ್ದಾರ್ಗೆ ಪತ್ರ ಬರೆದಿದ್ದಾರಂತೆ. ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಎಲ್ಲ ದಾಖಲೆ ವಾಟ್ಸ್ಆ್ಯಪ್ ಮಾಡಿದ್ದು, ನೋಡಿದ್ದಾರೆ. ಆದ್ರೆ, ಪರಿಹಾರ ಕೊಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ.