ಚಿಕ್ಕೋಡಿ: ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಬನಜವಾಡ ಗ್ರಾಮದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ 8 ಲಕ್ಷ ಮೌಲ್ಯದ 177 ಬ್ರಾಸ್ ಮರಳು ಜಪ್ತಿ ಮಾಡಿದ್ದಾರೆ. ತಹಸೀಲ್ದಾರ್ ಮೇಘರಾಜ ನಾಯಕ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಏಕಕಾಲಕ್ಕೆ ಅಧಿಕಾರಿಗಳು ಬನಜವಾಡ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇಲ್ಲಿನ ಪ್ರತಿ ನಾಗರಿಕರ ಮನೆಯ ಸಮೀಪ ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದು ಕಂಡುಬಂದಿದೆ. ಕೂಡಲೇ ಅವುಗಳನ್ನೆಲ್ಲಾ ವಶಕ್ಕೆ ಪಡೆದು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ಎ.ಎಸ್.ಮಗದುಮ್ ಅವರೊಂದಿಗೆ ಗ್ರಾಮ ಲೆಕ್ಕಾಧಿಕಾರಿಗಳು ಸಂಗ್ರಹಿಸಿದ ಮರಳು ಅಳತೆ ಮಾಡಿದರು.
ಸಂಗ್ರಹಿಸಿದ ಮರಳು ಯಾರಿಗೂ ಕಾಣದಂತೆ ಅದರ ಮೇಲೆ ಕಬ್ಬಿನ ಜಲ್ಲೆ, ತೆಂಗಿನ ಮರಗಳ ಒಣ ಟೊಂಗೆಗಳನ್ನು ಬಳಸಿ ಮುಚ್ಚಿಹಾಕಿದ್ದರು. ಆದರೆ, ಅಧಿಕೃತವಾಗಿ ಅಧಿಕಾರಿಗಳಿಗೆ ಮಾಹಿತಿ ಇದ್ದಿದ್ದರಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಗ್ರಾಮದ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 177 ಬ್ರಾಸ್ ಮರಳನ್ನು ವಶಕ್ಕೆ ಪಡೆಯಲಾಗಿದ್ದು, ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಬ್ರಾಸ್‌ಗೆ 4,670 ರಂತೆ ಹರಾಜು ಮಾಡಲಾಗುವುದು ಎಂದು ಕಾಗವಾಡ ಗ್ರೇಡ್-2 ತಹಸೀಲ್ದಾರ್ ವಿಜಯ ಚೌಗುಲೆ ತಿಳಿಸಿದ್ದಾರೆ.
ಕಾಗವಾಡ ತಾಲೂಕಿನ ಬನಜವಾಡ ಗ್ರಾಮದ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಳ್ಳುವಲ್ಲಿ ಗ್ರೇಡ್–2 ತಹಸೀಲ್ದಾರ ವಿಜಯಕುಮಾರ ಚೌಗುಲೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಂ.ಎಸ್. ಮಗದುಮ್, ಪಿಎಸ್‌ಐ ಹನುಮಂತ ಶಿರಹಟ್ಟಿ, ಕಂದಾಯ ನಿರೀಕ್ಷಕ ಬಸವರಾಜ ಬೋರಗಲ, ಗ್ರಾಮ ಲೆಕ್ಕಾಧಿಕಾರಿ ಈಶ್ವರಯ್ಯ ಹಿರೇಮಠ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬೇಸಿಗೆಯಲ್ಲಿ ಕುಡಿಯುವ ನೀರು ಸಿಗದೇ ಇರುವಾಗ ಯಾರೂ ಬರಲಿಲ್ಲ. ಈಗ ಅಕ್ರಮ ಎಂದು ವಶಪಡಿಸಿಕೊಳ್ಳಲು ಬಂದಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.