ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತಡರಾತ್ರಿವರೆಗೆ ನಡೆದಿದ್ದು, ಒಟ್ಟು 519 ನಾಮಪತ್ರಗಳು ಸ್ವೀಕೃತಗೊಂಡಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾದ ನಿನ್ನೆ ಒಟ್ಟು 434 ನಾಮಪತ್ರ ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆ ಆರಂಭಗೊಂಡ ಆ.16ರಿಂದ ಇಂದಿನವರೆಗೆ ಒಟ್ಟಾರೆ 519 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾಷಾಧಾರಿತವಾಗಿ ನಡೆಯುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇತರ ಕೆಲ ಪ್ರಾದೇಶಿಕ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ ಬಿಜೆಪಿ ಮಾತ್ರವೇ 58 ವಾರ್ಡ್ಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್, ಜೆಡಿಎಸ್ ಎಲ್ಲಾ ವಾರ್ಡ್ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಟಿಕೆಟ್ ವಂಚಿತರ ಬಂಡಾಯ ಸ್ಪರ್ಧೆ
ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿರುವುದು ರಾಜಕೀಯ ಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಕೈ-ಕಮಲ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದು, ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇನ್ನು 3 ದಿನಗಳ ಕಾಲ ಸಮಯಾವಕಾಶವಿದೆ.
ಇದನ್ನೂ ಓದಿ: ಬಿಡುಗಡೆ ಬಳಿಕ ಆತ್ಮೀಯ ಗೆಳೆಯನನ್ನು ಭೇಟಿ ಮಾಡಿದ ವಿನಯ್ ಕುಲಕರ್ಣಿ