ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಇಂದು ಕೊಯ್ನಾ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ, ಮತ್ತೆ ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
105 ಟಿಎಂಸಿ ಸಾಮರ್ಥ್ಯದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಜಲಾಶಯ 90 ಟಿಎಂಸಿ ಭರ್ತಿಯಾಗಿದ್ದು, ಮಳೆ ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಬಿಡುವ ಸಾಧ್ಯತೆ ಇದೆ. ಇದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ತೀರದ ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ಸದ್ಯ ಕೃಷ್ಣಾ ನದಿ ಒಳ ಹರಿವು 3,50,000 ಕ್ಯೂಸೆಕ್‌ಗಿಂತ ಹೆಚ್ಚಿದೆ.
ಜಿಲ್ಲೆಯಲ್ಲಿ ನೆರೆಪೀಡಿತ ಪ್ರದೇಶದ ಜನರ ಸ್ಥಿತಿ ಇನ್ನೂ ಅತಂತ್ರವಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರು ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿದ್ದರು.
ಆದರೆ, ಅದರಿಂದ ನೆರೆಪೀಡಿತರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಜಾನುವಾರುಗಳಿಗೆ ಸರಿಯಾದ ಪ್ರಮಾಣದಲ್ಲಿ ಮೇವೂ ಕೂಡ ದೊರೆಯುತ್ತಿಲ್ಲ. ಈಗ ಮತ್ತೆ ಕೊಯ್ನಾ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ನದಿ ತೀರದ ಜನರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಕೃಷ್ಣಾ ನದಿ ಪ್ರವಾಹಕ್ಕೆ ತತ್ತರಿಸಿದ ಜನ ; ಅಥಣಿಯ ಝುಂಜರವಾಡ ಸಂಪೂರ್ಣ ಜಲಾವೃತ