ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಪುಂಡಾಟಿಕೆ ಹಿನ್ನೆಲೆ ಸತತ 3ನೇ ದಿನವೂ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆ ಬೆಳಗಾವಿ ವಿಭಾಗಕ್ಕೆ 3 ದಿನಗಳಲ್ಲಿ 50 ಲಕ್ಷ ರೂ. ನಷ್ಟವಾಗಿದೆ ಎಂದು ಕೆಎಸ್ಆರ್ ಟಿಸಿ ಡಿಸಿ ಮಹದೇವಪ್ಪ ಮುಂಜಿ ಮಾಹಿತಿ ನೀಡಿದರು.
ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಶಿವಸೇನೆಯವರು ಕರ್ನಾಟಕದ ಬಸ್‌ಗಳನ್ನು ತಡೆದು ಮಸಿ ಬಳೆಯುತ್ತಿದ್ದಾರೆ. ಇದರ ಜೊತೆಗೆ ಕೊಲ್ಲಾಪುರದಲ್ಲಿ ವಾಣಿಜ್ಯ ಮಳಿಗೆಗಳ ಮೇಲಿನ ಕನ್ನಡ ನಾಮಫಲಕಗಳಿಗೂ ಮಸಿ ಬಳೆಯುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ನಿತ್ಯ ತೆರಳುತ್ತಿದ್ದ 348 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ ನಿತ್ಯ ಬರುತ್ತಿದ್ದ 58 ಎಂಎಸ್ಆರ್ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎರಡು ರಾಜ್ಯದ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈಗಾಗಲೇ ಕೊಲ್ಲಾಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಅವರು ಕೂಡ ಇಂದು ಕೊಲ್ಲಾಪುರ ಎಸ್‌ಪಿ, ಡಿಸಿ ಜೊತೆ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಬಸ್ ಸಂಚಾರ ಆರಂಭದ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಇದಲ್ಲದೇ ಸೊಲ್ಲಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಜೊತೆ ಮಾತನಾಡಿದ್ದೇವೆ. ಇಂದಿನಿಂದ ಸೊಲ್ಲಾಪುರಕ್ಕೆ 5 ಬಸ್‌ಗಳು ಸಂಚಾರ ಆರಂಭಿಸಲಾಗಿದ್ದು, ಕರ್ನಾಟಕದ ಬಸ್‌ಗಳು ಗಡಿ ಭಾಗದವರೆಗೆ ಸಂಚರಿಸುತ್ತಿವೆ ಎಂದು ಡಿಸಿ ಮುಂಜಿ ಹೇಳಿದರು.
ಓದಿ: ಶಿವಸೇನೆ ಪುಂಡಾಟ: ಎರಡನೇ ದಿನವೂ ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ