ಬೆಳಗಾವಿ/ಬೆಂಗಳೂರು: 2022ರ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 57 ಕಂಪನಿಗಳೊಂದಿಗೆ 5,41,369 ಕೋಟಿ ರೂ ಹೂಡಿಕೆಗೆ ಸಂಬಂಧಿಸಿದಂತೆ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ. ಇದೇ ರೀತಿ ಹುಬ್ಬಳ್ಳಿಯಲ್ಲಿ ನಡೆದ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದ ಮುಖಾಂತರ 16 ಕಂಪನಿಗಳೊಂದಿಗೆ ರಾಜ್ಯದಲ್ಲಿ 1,275 ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು. ಇವು ಬೃಹತ್ ಯೋಜನೆಗಳಾಗಿದ್ದರಿಂದ ಕಾರ್ಯಾರಂಭ ಮಾಡಲು 3-4 ವರ್ಷಗಳು ಹಿಡಿಯುತ್ತವೆ ಎಂದು ವಿವರಣೆ ನೀಡಿದರು.
ಎಫ್ಎಂಸಿಜಿ ಸಮಾವೇಶದಲ್ಲಾದ 16 ಒಡಂಬಡಿಕೆಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ಕೊಡಲಾಗಿದೆ. ಇವುಗಳಿಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಲ್ಕಂಡ ಎರಡು ಬಗೆಯ ಯೋಜನೆಗಳು ಅನುಷ್ಠಾನದ ನಾನಾ ಹಂತಗಳಲ್ಲಿವೆ. ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹಿಂದಿನ ಸರಕಾರವು 74.99 ಕೋಟಿ ರೂ. ವೆಚ್ಚ ಮಾಡಿದೆ. ಹಾಗೆಯೇ, ಹುಬ್ಬಳ್ಳಿಯಲ್ಲಿ 2022ರ ನವೆಂಬರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶಕ್ಕೆ 12.23 ಲಕ್ಷ ರೂ ಸರಕಾರದ ವತಿಯಿಂದ ಖರ್ಚು ಮಾಡಲಾಗಿದೆ ಎಂದರು.
ಇನ್ನು, ಸರಕಾರದ ನಿಯಮಾವಳಿಗಳ ಪ್ರಕಾರ ಈ ಉದ್ಯಮಗಳಲ್ಲಿ `ಡಿ’ ಗ್ರೂಪ್ ಹುದ್ದೆಗಳನ್ನು ಕನ್ನಡಿಗರಿಗೆ ಶೇ 100ರಷ್ಟು ಮತ್ತು ಒಟ್ಟಾರೆ ಶೇ.70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕೆನ್ನುವ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿಗೆ ಅಭಿನಂದನೆ: ಕಳೆದ ವಿಧಾನಸಭೆಯ ಅಧಿವೇಶನದ ಕಲಾಪದ ಒಂದು ದಿನವೂ ಗೈರಾಗದೇ ಗಮನ ಸೆಳೆದಿದ್ದ ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿಗೆ ಸ್ಪೀಕರ್ ಯು.ಟಿ.ಖಾದರ್ ಉಡುಗೊರೆ ನೀಡುವ ಮೂಲಕ ಅಭಿನಂದಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಬಿಡುವಿನ ಸಂದರ್ಭದಲ್ಲಿ ತಮ್ಮ ಕೊಠಡಿಗೆ ಕರೆಯಿಸಿಕೊಂಡ ಸ್ಪೀಕರ್ ಪುಟ್ಟ ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದರು.
ವಿಧಾನಸೌಧದಲ್ಲಿ ನಡೆದ ಕಳೆದ ಅಧಿವೇಶನದ 14 ದಿನಗಳ ಎಲ್ಲ ಕಾರ್ಯಕಲಾಪದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ದಿನದ ಕಲಾಪಗಳು ಮುಗಿಯುವವರೆಗೂ ಇದ್ದು ರೆಡ್ಡಿ ಗಮನ ಸೆಳೆದಿದ್ದರು. ಈ ಹಿನ್ನೆಲೆ ಅಭಿನಂದಿಸಿದ ಖಾದರ್ ಚುನಾಯಿತ ಪ್ರತಿನಿಧಿಗಳಿಗೆ ಕೇವಲ ತಮ್ಮ ಕ್ಷೇತ್ರದ ಬಗ್ಗೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ನಡೆಯುವ ಕಾರ್ಯಚಟುವಟಿಕೆ ಬಗ್ಗೆಯೂ ಗಮನ ಇರಬೇಕು. ಈ ನಿಟ್ಟಿನಲ್ಲಿ ಕಲಾಪದಲ್ಲಿನ ಚಟುವಟಿಕೆಗಳಲ್ಲಿ ಭಾಗಿಯಾಗುವ ನಿಮ್ಮ ಹಾಜರಾತಿ ನಡಾವಳಿಕೆ ಇತರರಿಗೆ ಮಾದರಿಯಾಗಿದೆ ಎಂದು ಸ್ಪೀಕರ್ ಅಭಿನಂದಿಸಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೂತನ ಪಕ್ಷ ಕಟ್ಟಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಜನಾರ್ದನ ರೆಡ್ಡಿ, ಸದನದ ಪ್ರತಿ ಕಲಾಪದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
ಇದನ್ನೂಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಇಲ್ಲ: ಸಚಿವ ಬೈರತಿ ಸುರೇಶ್