ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ವೃದ್ಧ ಹಾಗೂ ಜೂಗಳು ಗ್ರಾಮದ ದಂಪತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
60 ವರ್ಷದ ವೃದ್ಧ ಉಸಿರಾಟ ಹಾಗೂ ಅತಿಯಾದ ಜ್ವರದಿಂದ ಅಥಣಿ ಆಸ್ಪತ್ರೆಗೆ ಜುಲೈ 10ರಂದು ತೋರಿಸಿದ್ದರು. ಅತಿಯಾದ ಜ್ವರ ಇರುವುದರಿಂದ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿರುವ 13 ಜನರನ್ನು ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 29 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ವೃದ್ಧ ವಾಸವಾಗಿದ್ದ ಅಂಬೇಡ್ಕರ್ ನಗರವನ್ನು ಸೀಲ್ಡೌನ್ ಮಾಡಲಾಗಿದೆ.
ಜೂಗಳ ಗ್ರಾಮಕ್ಕೆ ಮುಂಬೈ ನಂಟಿದ್ದು, ದಂಪತಿಗಳಿಬ್ಬರಿಗೂ ಕೊರೊನಾ ದೃಢವಾಗಿದೆ. ಪತಿ (40) ಪತ್ನಿ (32) ಮುಂಬೈನಿಂದ ಜೂನ್ 09 ರಂದು ಬಾಗೇವಾಡಿಗೆ ಆಗಮಿಸಿದ್ದರು. ಅಲ್ಲಿ ಕ್ವಾರಂಟೈನ್ ಮುಗಿಸಿ ಜೂಗಳ ಗ್ರಾಮಕ್ಕೆ ಬಂದಿದ್ದೇವೆ ಎಂದು ವೈದ್ಯರಿಗೆ ತಿಳಿಸಿದ್ದರು. ಆದರೆ ಇವರ ಬಳಿ ಕ್ವಾರಂಟೈನ್ ಇದ್ದ ಮಾಹಿತಿ ಇಲ್ಲದ್ದರಿಂದ ಇವರನ್ನು ಜೂನ್ 27 ರಂದು ಜೂಗಳ ಗ್ರಾಮದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಜುಲೈ 04 ರಂದು ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ಇಂದು ದಂಪತಿಗೆ ಕೊರೊನಾ ಪಾಸಿಟಿವ್ ಖಾತ್ರಿಯಾಗಿದ್ದು, ಇವರ ಪ್ರಥಮ ಸಂಪರ್ಕದಲ್ಲಿ 14 ಜನರಿದ್ದು ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಜೂಗಳ ಪಂಚಾಯತಿ ಹಿಂಬದಿಯಲ್ಲಿರುವ ಓಣಿಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.