ಬೆಂಗಳೂರು/ಬೆಳಗಾವಿ: ಪಂಚಮಸಾಲಿ ಹಾಗೂ ಒಕ್ಕಲಿಗ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎರಡು ಪ್ರಬಲ ಸಮುದಾಯಗಳಿಗೆ 2C ಹಾಗೂ 2D ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಘೋಷಣೆ ಮಾಡಿದೆ.
3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಲಿಂಗಾಯಿತರಿಗೆ 2D ಕ್ಯಾಟಗರಿ ಸೃಷ್ಟಿಸಿ ಮಹತ್ವದ ತೀರ್ಮಾನ ಕೈಗೊಂಡಿದೆ. ಪಂಚಮಸಾಲಿಗರು ಕೇಳಿದ 2A ಮೀಸಲಾತಿಯನ್ನು ಸರ್ಕಾರ ನೀಡದಿರಲು ನಿರ್ಧರಿಸಿದೆ. ಅದರ ಬದಲಿಗೆ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತರಿಗೆ 2D ಪ್ರತ್ಯೇಕ ಪ್ರವರ್ಗ ಸೃಷ್ಟಿಸಲು ನಿರ್ಧರಿಸಿದೆ. ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಬಳಿಕ ನಿರ್ಧಾರ ಮಾಡಲು ಸಂಪುಟ ತೀರ್ಮಾನ ಮಾಡಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. 2A ನಲ್ಲಿ ಶೇ 15ರಷ್ಟು ಮೀಸಲಾತಿ ಇದ್ದು, ಅಲ್ಲಿರುವ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದಿರಲು ತೀರ್ಮಾನ ಮಾಡಲಾಗಿದೆ. ಅದೇ ರೀತಿ ಮುಸ್ಲಿಮರಿಗೆ ಕೊಡ ಮಾಡುವ 2B ಪ್ರವರ್ಗದಲ್ಲಿಯೂ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ಕೊಡುವ ಲೆಕ್ಕಚಾರ ಹೇಗಿದೆ?: 3A ನಲ್ಲಿ ಇದ್ದ ಒಕ್ಕಲಿಗರನ್ನು 2C ಗೆ ತರಲು ಹಾಗೂ 3B ನಲ್ಲಿ ಇದ್ದ ಪಂಚಮಸಾಲಿ ಸೇರಿ ಲಿಂಗಾಯತರನ್ನು 2D ಪ್ರವರ್ಗಕ್ಕೆ ಸೇರ್ಪಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ EWSನ ಶೇ 10ರಷ್ಟು ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುವ ಜನರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಮೀಸಲಾತಿ ನೀಡಿ, ಉಳಿದದ್ದನ್ನು 2C ಹಾಗೂ 2Dಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ ಅಂತಾ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ 3A (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 3B (ವೀರಶೈವ ಮತ್ತು ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು) ಇದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸಿನ ಅನ್ವಯ, ಈ ಪ್ರವರ್ಗಗಳ ಪೈಕಿ, 3A ಮತ್ತು 3B ಪ್ರವರ್ಗಗಳನ್ನು ತೆಗೆದುಹಾಕಿ, ಅದರ ಬದಲು ಪ್ರವರ್ಗ 2C ಮತ್ತು 2D ರಚಿಸಿ, ಇಡಬ್ಲ್ಯುಎಸ್ ಮೀಸಲಾತಿ ಮರು ಹಂಚಿಕೆ ಮಾಡುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳನ್ನು ತೃಪ್ತಿಪಡಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ 'ಪ್ರವರ್ಗ-3ಎ'ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ ಶೇ12ಕ್ಕೆ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ. ಈ ಪ್ರವರ್ಗವನ್ನು 'ಪ್ರವರ್ಗ 2ಸಿ' ಎಂದು ಬದಲಾಯಿಸಲಾಗಿದ್ದು, ಇಡಬ್ಲ್ಯುಎಸ್ ಮೀಸಲಾತಿಯಿಂದ ಶೇ. 3ರಷ್ಟನ್ನು ಮರುಹಂಚಿಕೆ ಮಾಡಿ, ಈ ಹೊಸ ಪ್ರವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ. 7ಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ.
3Bಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ತಮ್ಮನ್ನು 'ಪ್ರವರ್ಗ 2ಎ'ಗೆ ಸೇರಿಸಬೇಕೆಂದು ಪಟ್ಟು ಹಿಡಿದಿತ್ತು. ಪ್ರವರ್ಗ 3ಬಿಗೆ ಸದ್ಯ ಶೇ.5ರಷ್ಟು ಮೀಸಲಾತಿಯಿದೆ. ಇದೀಗ ಪ್ರತ್ಯೇಕ ಪ್ರವರ್ಗ 2ಡಿ ರಚಿಸಲಾಗಿದ್ದು, ಇಡಬ್ಲ್ಯುಎಸ್ ಮೀಸಲಾತಿಯಿಂದ ಶೇ.4ರಷ್ಟನ್ನು 2Dಗೆ ಮರುಹಂಚಿಕೆ ಮಾಡಲು ಚಿಂತಿಸಲಾಗಿದೆ.
ಇದನ್ನೂ ಓದಿ: ಸರ್ಕಾರವು ರಂಗ ಎಂಬುದನ್ನು ತೆಗೆದು ಮಂಗ ಎಂಬಂತೆ ಮಾಡಿದೆ: ಮೀಸಲಾತಿ ಘೋಷಣೆ ವಿರುದ್ಧ ಹೆಚ್ಡಿಕೆ ಕಿಡಿ