ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಡಿಸೆಂಬರ್ 19ರೊಳಗೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 24ರಂದೇ ಮಾತು ಕೊಟ್ಟಿದ್ದರು. ಅವರ ಮಾತಿನ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ. ಸರ್ಕಾರಕ್ಕೆ ನೆನಪಿಸಲು ಇಂದು ರಾಜ್ಯ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಈಗಾಗಲೇ ಸಭೆ ಆಗಿದೆ. ಡಿ.19ರೊಳಗೆ ಮೀಸಲಾತಿ ಘೋಷಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 22ರಂದು ಬೆಳಗಾವಿಯ ವಿಕಾಸಸೌಧದ ಮುಂದೆ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಲಾಗುವುದು ಎಂದಿದ್ದಾರೆ.
ಒಂದು ವೇಳೆ, ಡಿ.19ರಂದು ಮೀಸಲಾತಿ ಘೋಷಣೆ ಮಾಡಿದರೆ ಡಿ.22ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಲಾಗುತ್ತದೆ. ಮಾಡದಿದ್ದರೆ ಈ ಮೊದಲ ಹೇಳಿದಂತೆ ವಿರಾಟ್ ಪಂಚಶಕ್ತಿ ಸಮಾವೇಶ ಹಾಗೂ ವಿಕಾಸಸೌಧಕ್ಕೆ ಮುತ್ತಿಗೆ ನಡೆಸಲಾಗುವುದು. ಅದೇ ವೇದಿಕೆಯಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು. ಹಾಗಾಗಿ ಇತಿಹಾಸ ನಿರ್ಮಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ವಿರಾಟ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಎ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್, ಕೋಶಾಧ್ಯಕ್ಷರಾಗಿ ಈರಣ್ಣಾ ಕಡಾಡಿ ಅವರನ್ನು ನೇಮಕ ಮಾಡಿದ್ದೇವೆ. ಎಲ್ಲ ನಮ್ಮ ಜನಾಂಗದ ಶಾಸಕರು, ಮಾಜಿ ಶಾಸಕರು ಸಹಕಾರ ನೀಡುವ ಭರವಸೆ ಇದೆ. ಬೆಳಗಾವಿ ಜಿಲ್ಲೆಯಿಂದಲೇ 10 ಲಕ್ಷ ಜನ ಬರಬೇಕು ಎಂದು ಆಹ್ವಾನ ನೀಡಿದ್ದೇವೆ.
ಡಿ.19ರೊಳಗೆ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ಡಿ.19ರಂದು ಸವದತ್ತಿಯಿಂದ ವಿಧಾನಸೌಧಕ್ಕೆ ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆ ಸಹ ಹಮ್ಮಿಕೊಂಡಿದ್ದೇವೆ. ಮೀಸಲಾತಿ ಕೊಟ್ರೆ ಸನ್ಮಾನ, ಮೀಸಲಾತಿ ನೀಡದಿದ್ದರೆ ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನದ ಉಪಹಾರ, ಕ್ಷೀರಭಾಗ್ಯ ಯೋಜನೆ ಪರಿಣಾಮಕಾರಿ ಅನುಪಾಲನೆಗೆ ಶಿಫಾರಸು ವರದಿ ಸಲ್ಲಿಕೆ