ಬೆಳಗಾವಿ : ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿ ಕಾರ್ಯಕ್ಕಾಗಿ ಒಟ್ಟು 22.26 ಲಕ್ಷ ರೂ.ಗಳ ಕೊಡುಗೆ ನೀಡಿದ್ದಾರೆ.
ಬೆಳಗಾವಿಯ ಜಿನಾಬಾಕುಲ್ ಫೋರ್ಜ್ ಪ್ರೈವೇಟ್ ಲಿಮಿಟೆಡ್ ರೂ. 4,56,000, ಜೆಪಿಎಫ್ ಮೆಟಾಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ರೂ. 1,25,000, ಯಂಕಾಯ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ರೂ. 1,20,000, ಏಕಸ್ ರೂ. 10,00,000, ನೆತಾಲ್ಕರ್ ಪವರ್ ಟ್ರಾನ್ಸ್ಮಿಷನ್ ರೂ. 5,00,000 ಹಾಗೂ ಡೈಮೆಂಡ್ ಮೆಟಲ್ ಸ್ಕ್ರೀನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ರೂ. 25,000 ಸೇರಿ ಒಟ್ಟು 22.26 ಲಕ್ಷ ಹಣ ಕೊಡುಗೆಯಾಗಿ ಬಂದಿದೆ.
ಕೊಡುಗೆ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಸನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು. ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ಉಮೇಶ್ ಕೆ. ಕುಲಕರ್ಣಿ ಹಾಗೂ ಮುಖ್ಯ ಆಡಳಿತಾಧಿಕಾರಿ ಎಸ್ ಎಸ್ ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಉಪಸ್ಥಿತರಿದ್ದರು.