ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಹಾಗೂ ಗೋವಾಗೆ ಸಂಪರ್ಕ ಕೊಂಡಿಯಂತಿರುವ ಬೆಳಗಾವಿಯಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆನ್‌ಲೈನ್ ಮೂಲಕ ಶ್ರೀಮಂತ ಯುವಕರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಮೇಲೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಸಿಇಎನ್ ಪೊಲೀಸರು ದಾಳಿ ಮಾಡಿದ್ದು, ಮೂವರು ಯುವತಿಯರನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೇಟ್ ವೆ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿ ಬೆಳಗಾವಿ ಮೂಲದ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಸಿಇಎನ್ ಪೊಲೀಸರು ಆನ್‌ಲೈನ್ ನಲ್ಲಿ ಹೇಗೆ ವಂಚನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮಾಡ್ತಿದ್ದಾರೆ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ರಕ್ಷಣೆ ಮಾಡಿದ ಮೂವರು ಯುವತಿಯರನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿದೆ.
ಈ ಮಸಾಜ್ ಪಾರ್ಲರ್ ತನ್ನದೇ ಹೆಸರಿನಲ್ಲಿ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದು ಅದರಲ್ಲಿದ್ದ ನಂಬರ್ ನೋಡಿ ಸಂಪರ್ಕಿಸಿದವರಿಗೆ ವಾಟ್ಸ್ಆ್ಯಪ್ನಲ್ಲಿ ಯುವತಿಯರ ಫೋಟೋ ಕಳಿಸಿ ಮಾಡ್ತಿತ್ತು. ರಾಜ್ಯವಷ್ಟೇ ಅಲ್ಲದೆ ಗುಜರಾತ್ ಸೇರಿ ಹೊರ ರಾಜ್ಯದ ಯುವತಿಯರನ್ನು ಕೆಲಸ ಕೊಡಿಸ್ತೀವಿ ಅಂತಾ ಕರೆಸಿ ಮಾಂಸ ದಂಧೆ ಮಾಡಿಸ್ತಿತ್ತು. ಇಂತಹದ್ದೇ ಮತ್ತೊಂದು ಗ್ಯಾಂಗ್‌ನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ಮಾರುತಿ ಬಾಳಪ್ಪ ಕಳಗೇರಿ ಹಾಗೂ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದ ಸಿದ್ದಪ್ಪ ಚೌಗುಲಾ ಎಂಬ ಕಿರಾತಕರನ್ನು ಬಂಧಿಸಲಾಗಿದೆ. ಈ ಐನಾತಿಗಳು ಬೆಳಗಾವಿಯ ಪ್ರತಿಷ್ಠಿತ ಬಡಾವಣೆಯಾದ ಸದಾಶಿವನಗರದಲ್ಲಿ ಮನೆ ಮಾಡಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ರು.
ಬೆಳಗಾವಿ ಈ ರೀತಿ ಅನೈತಿಕ ಚಟುವಟಿಕೆಗಳ ತಾಣ ಆಗ್ತಿರೋದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಇಂತಹ ದಂಧೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.